ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್ ಸಭೆ ಶನಿವಾರ ನಿಗದಿಯಾಗಿದ್ದು, ಸಭೆಯಲ್ಲಿ ಶಿವಾಜಿ ಪುತ್ಥಳಿಯನ್ನು ಪಂಪ್ ವೆಲ್ ವೃತ್ತದಲ್ಲಿ ಸ್ಥಾಪಿಸಲು ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದ್ದಾರೆ. ಇದಕ್ಕೆ ಸಾರ್ವಜನಿಕ ವಿರೋಧವಿದೆ ಮತ್ತು ಹಾಲಿ ವಿರೋಧ ಪಕ್ಷ ಸದ್ರಿ ಪ್ರಸ್ತಾವನೆಯನ್ನು ವಿರೋಧಿಸಬೇಕು ಎಂದು ಮಾಜಿ ಮೇಯರ್ ಕೆ.ಅಶ್ರಫ್ ಮನವಿ ಮಾಡಿದ್ದಾರೆ.
ಪಂಪ್ ವೆಲ್ ವೃತ್ತದಲ್ಲಿ ಕರ್ನಾಟಕ, ಕನ್ನಡ ಭಾಷೆ, ಸಂಸ್ಕೃತಿ ಉಳಿವಿನ ಭಾಗವಾಗಿ, ಮಂಗಳೂರು ಸುಂದರ ನಗರೀಕರಣದ ಭಾಗವಾಗಿಯೂ, ಮನಪಾ, ಮಂಗಳೂರಿನ ಪ್ರತಿಷ್ಠಿತ ಪಂಪ್ ವೆಲ್ ವೃತ್ತಕ್ಕೆ ಕರ್ನಾಟಕದ ಹೆಮ್ಮೆಯ ಪುತ್ರ, ಅವಿಭಜಿತ ಮೈಸೂರು ರಾಜ್ಯದ ನಿವಾಸಿ, ಕನ್ನಡ ಭಾಷಾ ಹೋರಾಟಗಾರ, ಕವಿ, ಸಾಹಿತಿ, ಗಡಿನಾಡ ಕನ್ನಡಿಗ ಕಯ್ಯಾರ ಕಿಞ್ಞಣ್ಣ ರೈ ಅವರ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಮಾಜಿ ಮೇಯರ್ ಕೆ.ಅಶ್ರಫ್ ಒತ್ತಾಯಿಸಿದ್ದಾರೆ.
ಕಯ್ಯಾರ ಕಿಞ್ಞಣ್ಣ ರೈ ಅವರು ಕರ್ನಾಟಕ ಏಕೀಕರಣ ಸಮಿತಿಯ ಪರವಾಗಿ ಅಹನಿರ್ಶಿ ದುಡಿದ ಓರ್ವ ಸೇನಾನಿ. ಕರ್ನಾಟಕದ ಸಂಸ್ಕೃತಿ, ಭಾಷೆ, ನುಡಿಯ ಪರ ತನ್ನ ಅಂತಿಮ ಉಸಿರು ಇರುವವರೆಗೂ ಹೋರಾಟ ಮಾಡಿದ ಮೇಧಾವಿ ಆಗಿದ್ದು, ಅವರ ಸವಿ ನೆನಪಿಗೆ ಮಂಗಳೂರು ನಗರ ಪಾಲಿಕೆ ಅವರ ಪುತ್ಥಳಿ ಸ್ಥಾಪಿಸಿ ಗೌರವ ನೀಡಬೇಕಿದೆ. ಮನಪಾ ಪರಿಷತ್ ಸಭೆಯಲ್ಲಿ ಶಿವಾಜಿ ಪುತ್ಥಳಿ ಸ್ಥಾಪನೆ ವಿಷಯವನ್ನು ಪ್ರಸ್ತಾವನೆ ಸಲ್ಲಿಸುವುದು ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ. ಬೆಳಗಾವಿ ಗಡಿಯಲ್ಲಿ ಕನ್ನಡದ ಧ್ವಜ, ಸಂಸ್ಕೃತಿಗಳನ್ನು ನಾಶಪಡಿಸುವ ಪ್ರಯತ್ನ ನಡೆಯುತ್ತಿದ್ದರೂ ಮಂಗಳೂರಿನ ಕೆಲವು ಅಧಿಕಾರಧಾಹಿ ಜನಪ್ರತಿನಿಧಿಗಳು ರಾಜ್ಯದ ಜನರ ಭಾವನೆಗಳ ಮೇಲೆ ಚೆಲ್ಲಾಟ ವಾಡುವುದು ಖಂಡನೀಯ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ತೀವ್ರ ಹೋರಾಟ ನಡೆಸಲಾಗುವುದು. ಇದರ ವಿರುದ್ಧ ಪಾಲಿಕೆಯ ಇತರ ಸದಸ್ಯರು, ಜಿಲ್ಲೆಯ ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದ್ದಾರೆ.