ನವದೆಹಲಿ: ಭಯೋತ್ಪಾದಕ ಕೃತ್ಯಗಳ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ತನಿಖಾ ಏಜೆನ್ಸಿಗಳಿಗೆ ಯುಎಪಿಎ ಕಾಯ್ದೆಯು ಅತ್ಯಂತ ಸೂಕ್ತವಾದುದು ಎಂದು ಪ್ರಧಾನಿ ಮೋದಿ ಹೇಳಿದರು.
ಅವರು ಹರಿಯಾಣದ ಸೂರಜ್ ಕುಂಡ್ ನಲ್ಲಿ ನಡೆದ ರಾಜ್ಯಗಳ ಗೃಹ ಮಂತ್ರಿಗಳ ಮತ್ತು ಡಿಜಿಪಿಗಳ ಚಿಂತನ ಶಿವಿರ್ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಹೀಗೆ ಹೇಳಿದರು.
“ಯುವಕರ ಭಾವನೆಗಳನ್ನು ಕೆರಳಿಸಿ ದೇಶದ ಒಗ್ಗಟ್ಟನ್ನು ಮುರಿಯುವ ಶಕ್ತಿಗಳನ್ನು ಮುರಿದಿಕ್ಕಲು ಬುದ್ಧಿಮತ್ತೆಯ ಸಾಮರ್ಥ್ಯವು ಇದರಿಂದ ಅಧಿಕರಿಸಿದೆ” ಎಂದೂ ಪ್ರಧಾನಿ ತಿಳಿಸಿದರು.
ಭಾರತದ ಕಠಿಣ ಯುಎಪಿಎ ಕಾಯ್ದೆಯು ಯಾವುದೇ ಪುರಾವೆಗಳನ್ನು ಒದಗಿಸದೆ ಒಬ್ಬರನ್ನು ಉಗ್ರ ಸಂಬಂಧಿ ಎಂದು ಬಂಧಿಸಲು ತನಿಖಾಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಇದು ತೀವ್ರ ನಿಯಮಗಳ ಕಾಯ್ದೆಯಾದುದರಿಂದ ಇದರಡಿ ಬಂಧಿತರು ಜಾಮೀನು ಪಡೆಯುವುದು ತುಂಬ ಕಷ್ಟ. ಇದರರ್ಥ ಯಾವುದೇ ಅಪರಾಧ ಪತ್ತೆಯಾಗದೆಯೇ ಯುವಕರು ತಿಂಗಳಾನುಗಟ್ಟಲೆ ಮಾತ್ರವಲ್ಲ ವರ್ಷಗಟ್ಟಲೆ ಕೂಡ ಬಂಧನದಲ್ಲಿ ಇಡಬಹುದಾಗಿದೆ.
2008ರಲ್ಲಿ ಕಾಂಗ್ರೆಸ್ ಪಕ್ಷವು ಮೊದಲಿಗೆ ಯುಎಪಿಎ ಕಾಯ್ದೆಯನ್ನು ಜಾರಿಗೆ ತಂದಿತು. 2019ರಲ್ಲಿ ಹಿಂದೂ ರಾಷ್ಟ್ರೀಯವಾದಿ ಮೋದಿ ಸರಕಾರವು ಇದನ್ನು ನೇರ ತನಿಖಾ ಸಂಸ್ಥೆಗಳ ಉಗ್ರ ದಮನ ಬಳಕೆಗೆ ಒದಗಿಸಿತು. ಅದಕ್ಕೆ ಮೊದಲು ಈ ಕಾಯ್ದೆಯು ತನಿಖಾ ಸಂಸ್ಥೆಗಳಿಗಲ್ಲದೆ ಸಾಂಸ್ಥಿಕ ಅಧಿಕಾರಕ್ಕೆ ಮಾತ್ರ ಬಳಕೆಗೆ ಇತ್ತು.
ಇತ್ತೀಚಿನ ದಿನಗಳಲ್ಲಿ ಇದನ್ನು ಆಗಾಗ ಎಲ್ಲೆಂದರಲ್ಲಿ ಬಳಸುತ್ತಿರುವುದು ಅಧಿಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಮಂದಿ ಪತ್ರಕರ್ತರನ್ನು, ಮಾನವ ಹಕ್ಕುಗಳ ಕಾರ್ಯಕರ್ತರನ್ನು, ಹೆಚ್ಚಾಗಿ ಮುಸ್ಲಿಂ ವಿದ್ಯಾರ್ಥಿಗಳನ್ನು ಯುಎಪಿಎ ಅಡಿ ಬಂಧಿಸಿದ್ದಾರೆ. ಹಾಗಾಗಿ ಈ ಕಾಯ್ದೆಯು ತೀವ್ರವಾಗಿ ಟೀಕೆಗೆ ಮತ್ತು ವಿವಾದಕ್ಕೆ ಒಳಗಾಗಿದೆ.
ಎನ್ ಸಿಆರ್ ಬಿ- ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ಮಾಹಿತಿಯಂತೆ 2015- 2020ರ ನಡುವೆ ಯುಎಪಿಎ ಅಡಿ ಬಂಧಿಸಲಾದವರಲ್ಲಿ 3% ಜನರಿಗೆ ಮಾತ್ರ ಶಿಕ್ಷೆ ಆಗಿದೆ.
ಭಾರತದ ಅತಿ ಕಠಿಣ ಯುಎಪಿಎ ಕಾಯ್ದೆಯಡಿ ಬಂಧಿಸಿದ 8,371 ಜನರಲ್ಲಿ ಕಳೆದ ಐದು ವರ್ಷಗಳಲ್ಲಿ 235 ಜನರಿಗೆ ಮಾತ್ರ ಶಿಕ್ಷೆಯಾಗಿದೆ. ಎನ್ ಸಿ ಆರ್ ಬಿ ಮಾಹಿತಿಯ ಮೇಲೆ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ ಈ ವರದಿಯನ್ನು ನೀಡಿದೆ.
ಈ ಕಠಿಣ ಕಾಯ್ದೆಯಡಿ ಬಂಧಿಸಿದವರಲ್ಲಿ 97.2 ಶೇಕಡಾ ಜನರ ಬಿಡುಗಡೆಯಾಗಿದೆ. ಅಂದರೆ ಯುಎಪಿಎ ಕಾಯ್ದೆಯಡಿ ವಿಚಾರಹೀನವಾಗಿ ಬಂಧನ ನಡೆದಿದ್ದು ಅನಗತ್ಯವಾಗಿ ಸಾವಿರಾರು ಜನ ಕಾರಣವಿಲ್ಲದೆ ಸೆರೆಮನೆ ವಾಸ ಅನುಭವಿಸಿದ್ದಾರೆ.
ಪ್ರಧಾನಿ ಮೋದಿಯವರ ಭಾಷಣಕ್ಕೆ ಹಿರಿಯ ಸಂಸದ ಅಸದುದ್ದೀನ್ ಉವೈಸಿ ಹೀಗೆ ಟ್ವೀಟ್ ಮಾಡಿ ಕುಟುಕಿದ್ದಾರೆ: “2018- 2020ರಲ್ಲಿ ಯುಎಪಿಎ ಅಡಿ 4,690 ಜನರನ್ನು ಬಂಧಿಸಿದರು. ಬರೇ 3% ಜನರಿಗೆ ಶಿಕ್ಷೆಯಾಗಿದೆ. ಸರಕಾರಕ್ಕೆ ಕಾರಣವಿಲ್ಲದೆ ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಲು ಯುಎಪಿಎ ಅಧಿಕಾರ ನೀಡಿದೆ. ಯುಎಪಿಎ ಒಂದು ಕೆಟ್ಟ ಕಾನೂನು, ಇದು ಉಗ್ರ ಕೃತ್ಯ ತಡೆಯುವ ಯಾವ ಕೆಲಸವನ್ನೂ ಮಾಡುತ್ತಿಲ್ಲ.”