ಹಕ್ಕಿ ಸ್ವತಂತ್ರವಾಗಿದೆ: ಟ್ವಿಟ್ಟರ್ ಖರೀದಿಸಿದ ಬಳಿಕ ಎಲಾನ್ ಮಸ್ಕ್ ಟ್ವೀಟ್

Prasthutha|

ವಾಷಿಂಗ್ಟನ್: ಟ್ವೀಟ್ ಹಕ್ಕಿ ಇದೀಗ ಸ್ವತಂತ್ರವಾಗಿದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಪ್ರತಿಕ್ರಿಯಿಸಿದ್ದಾರೆ.

- Advertisement -

ಟ್ವಿಟ್ಟರ್ ಕಂಪೆನಿಯನ್ನು ಖರೀದಿಸುವ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದ ಬಳಿಕ ಮೊದಲ ಬಾರಿಗೆ ಟ್ವೀಟ್ ಮಾಡಿರುವ ಅವರು ಹಕ್ಕಿ ಈಗ ಸ್ವತಂತ್ರವಾಗಿದೆ ಎಂಬ ಸಂದೇಶವನ್ನು ಬಹಿರಂಗಗೊಳಿಸಿದ್ದಾರೆ.

ಟ್ವಿಟರ್ ಕಂಪೆನಿಯನ್ನು ರೂ. 3.62 ಲಕ್ಷ ಕೋಟಿಗೆ ಖರೀದಿಸಿದ ಜಗತ್ತಿನ ಕೆಲವು ಶ್ರೀಮಂತರಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್, ಮೂರು ನಾಲ್ಕು ಪದಗಳಲ್ಲಿ ಅತ್ಯಂತ ಸಣ್ಣ ವಾಕ್ಯದ ಮೂಲಕ ಹಲವು ಬಗೆಯ ಅರ್ಥವಿರುವ ಪೋಸ್ಟ್ ಅನ್ನು ಅಪ್ಲೋಡ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

- Advertisement -

ಈ ಮಧ್ಯೆ ಟ್ವಿಟ್ಟರ್ ಕಂಪೆನಿಯ ಒಡೆತನವನ್ನು ಸ್ವೀಕರಿಸಿದ ತಕ್ಷಣ ಕಂಪೆನಿಯ ಸಿಇಒ ಪರಾಗ್ ಅಗರ್’ವಾಲ್, ಕಾನೂನು ವ್ಯವಹಾರ, ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿದ್ದಾರೆ. ಟ್ವಿಟ್ಟರ್’ನ ಫೇಕ್ ಅಕೌಂಟ್’ಗಳ ಕುರಿತು ಈ ಸಿಬ್ಬಂದಿ ತನ್ನ ದಿಕ್ಕು ತಪ್ಪಿಸಿದ್ದರು ಎಂದು ಎಲಾನ್ ದೂರಿದ್ದಾರೆ.

ಟ್ವಿಟ್ಟರ್ ಪ್ರಧಾನ ಕಚೇರಿಗೆ ವಾಷ್ ಬೇಸಿನ್’ನೊಂದಿಗೆ ಆಗಮಿಸಿದ ಎಲಾನ್ ಮಸ್ಕ್, ಸಿಂಕ್ ಅನ್ನು ಅಳವಡಿಸೋಣ ಎಂಬ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದರು. ವಾಷ್ ಬೇಸಿನ್ ಅನ್ನು ಸಾಮಾನ್ಯವಾಗಿ ಶುಚಿಗೊಳಿಸಲು ಉಪಯೋಗಿಸಲಾಗುತ್ತಿದ್ದು, ಸ್ವಚ್ಛತೆಯ ಹೆಸರಿನಲ್ಲಿ ಕಂಪೆನಿಯಲ್ಲಿರುವ ಕೆಲವು ನಿಯಮ ಮತ್ತು ವ್ಯಕ್ತಿಗಳನ್ನು ಬದಲಾಯಿಸುವ ಸೂಚನೆ ನೀಡಿದ್ದರು ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಇವತ್ತು ಹಲವು ಉನ್ನತ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.



Join Whatsapp