ಪರಸ್ತ್ರೀ ಜೊತೆ ಕಾರಿನಲ್ಲಿ ಸಿಕ್ಕಿಬಿದ್ದ ನಿರ್ಮಾಪಕ: ಪತ್ನಿಯ ಮೇಲೆ ಕಾರು ಹರಿಸಲು ಯತ್ನ

Prasthutha|

ಮುಂಬೈ: ಪತ್ನಿಯ ಮೇಲೆ ಕಾರು ಹರಿಸಿದ ಆರೋಪದ ಮೇಲೆ ಸಿನಿಮಾ  ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

ಆರೋಪಿ ಕಮಲ್ ಮಿಶ್ರಾ ಬೇರೊಂದು ಮಹಿಳೆಯ ಜೊತೆ ಕಾರಿನಲ್ಲಿ ಇರುವುದನ್ನು ಪತ್ನಿ ಪತ್ತೆ ಹಚ್ಚಿ, ಪ್ರಶ್ನಿಸಲು ಮುಂದಾದಾಗ ಮಿಶ್ರಾ ಕಾರು ಹರಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯು ಅಕ್ಟೋಬರ್ 19ರಂದು ಸಬ್ಅರ್ಬನ್ ಅಂಧೇರಿ(ಪಶ್ಚಿಮ)ದ ವಸತಿ ಕಟ್ಟಡದ ಗಾಡಿ ನಿಲುಗಡೆ ಪ್ರದೇಶದಲ್ಲಿ ನಡೆದಿದೆ. ಕಾರು ಹರಿದು ಕಮಲ್ ಮಿಶ್ರಾ ಪತ್ನಿ ಗಾಯಗೊಂಡಿದ್ದರು. ಇದೀಗ ನಿರ್ಮಾಪಕ ಕಮಲ್ ಮಿಶ್ರಾ ವಿರುದ್ಧ ಆತನ ಪತ್ನಿ ಅಂಬೊಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

ಮಿಶ್ರಾ ಅವರ ಪತ್ನಿಯು ಪತಿಯನ್ನು ಹುಡುಕುತ್ತ ಹೊರಗೆ ಬಂದಿದ್ದ ಸಂದರ್ಭದಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿ ಬೇರೆ ಮಹಿಳೆಯ ಜೊತೆ ಕಾರಿನಲ್ಲಿ ಇರುವುದನ್ನು ಗಮನಿಸಿದ್ದಾರೆ. ತಡೆಯಲು ಬಂದ ಪತ್ನಿಯಿಂದ ತಪ್ಪಿಸಿಕೊಳ್ಳಲು ಮಿಶ್ರಾ ಕಾರನ್ನು ವೇಗವಾಗಿ ಓಡಿಸಿದ್ದಾರೆ. ಈ ಸಂದರ್ಭ ಪತ್ನಿಗೆ ಕಾರು ಗುದ್ದಿದ್ದು,  ಆಕೆಯ ಕೈ, ಕಾಲು ಹಾಗೂ ತಲೆಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಿಶ್ರಾ ವಿರುದ್ಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.



Join Whatsapp