ಪರ್ತ್: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಗುರುವಾರ ಮೂರು ಪಂದ್ಯಗಳು ನಡೆಯಲಿದೆ. ಸೂಪರ್ 12, ಗ್ರೂಪ್ 2ರಲ್ಲಿ ಎಲ್ಲ ಆರು ತಂಡಗಳು ತಮ್ಮ 2ನೇ ಪಂದ್ಯವನ್ನಾಡಲು ನಾಳೆ ಮೈದಾನಕ್ಕಿಳಿಯಲಿದೆ. ಮೊದಲ 2 ಪಂದ್ಯಗಳು ಸಿಡ್ನಿಯಲ್ಲಿ ಮತ್ತು, ಮೂರನೇ ಪಂದ್ಯ ಪರ್ತ್ ಮೈದಾನದಲ್ಲಿ ನಡೆಯಲಿದೆ.
ಭಾರತೀಯ ಕಾಲಮಾನ ಬೆಳಗ್ಗೆ 8.30ಕ್ಕೆ ನಡೆಯಲಿರುವ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದೆ. ಮಧ್ಯಾಹ್ನ 12.30ಕ್ಕೆ ನಡೆಯುವ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ, ನೆದರ್‌ಲ್ಯಾಂಡ್ ಸವಾಲನ್ನು ಎದುರಿಸಲಿದೆ. ಸಂಜೆ 4.30ಕ್ಕೆ ಆರಂಭವಾಗುವ ದಿನ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ-ಜಿಂಬಾಬ್ವೆ ನಡುವೆ ಹಣಾಹಣಿ ನಡೆಯಲಿದೆ.
ಭಾರತ vs ನೆದರ್ಲ್ಯಾಂಡ್
ಭಾನುವಾರ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿರುವ ರೋಹಿತ್ ಬಳಗ, ನೆದರ್‌ಲ್ಯಾಂಡ್ ವಿರುದ್ಧ ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 9 ರನ್‌ಗಳ ಅಂತರದಲ್ಲಿ ಶರಣಾಗಿದ್ದ ನೆದರ್‌ಲ್ಯಾಂಡ್ ಗೆಲುವಿನ ಒತ್ತಡಕ್ಕೆ ಸಿಲುಕಿದೆ.
ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಗೆಲುವಿನಂಚಿನಲ್ಲಿದ್ದ ದಕ್ಷಿಣ ಆಫ್ರಿಕಾಗೆ ಮಳೆ ವಿಲನ್ ಆಗಿ ಕಾಡಿತ್ತು. ಮುಂದಿನ 4 ಓವರ್‌ಗಳಲ್ಲಿ ಕೇವಲ 13 ರನ್ ಗಳಿಸಬೇಕಾದ ಗುರಿ ಆಫ್ರಿಕಾ ಮುಂದಿತ್ತು. ಆದರೆ ಈ ವೇಳೆ ಮಳೆ ಸುರಿದ ಪರಿಣಾಮ ಪಂದ್ಯವನ್ನು ರದ್ದುಗೊಳಿಸಿ ಉಭಯ ತಂಡಗಳಿಗೂ ತಲಾ 1 ಅಂಕಗಳನ್ನು ನೀಡಲಾಗಿತ್ತು. ಹೀಗಾಗಿ ಬಾಂಗ್ಲಾದೇಶದ ವಿರುದ್ಧದ ನಾಳಿನ ಪಂದ್ಯ ಆಫ್ರಿಕಾ ಪಾಲಿಗೆ ಮಹತ್ವದ್ದಾಗಿದೆ.
ಪಾಕಿಸ್ತಾನ vs ಜಿಂಬಾಬ್ವೆ
ಭಾರತದ ವಿರುದ್ಧ ಅಂತಿಮ ಎಸೆತದವರೆಗೂ ಹೋರಾಡಿ ಶರಣಾಗಿದ್ದ ಪಾಕಿಸ್ತಾನ, ಜಿಂಬಾಬ್ವೆ ತಂಡವನ್ನು ಭಾರೀ ಅಂತರದಲ್ಲಿ ಮಣಿಸುವ ಲೆಕ್ಕಾಚಾರದೊಂದಿಗೆ ಪರ್ತ್‌ನಲ್ಲಿ ಕಣಕ್ಕಿಳಿಯಲಿದೆ. ವಿಶ್ವದರ್ಜೆಯ ಬೌಲಿಂಗ್ ಪಡೆಯನ್ನು ಹೊಂದಿರುವ ಪಾಕಿಸ್ತಾನವನ್ನು ದುರ್ಬಲ ಜಿಂಬಾಬ್ವೆ ಹೇಗೆ ನಿಭಾಯಿಸಲಿದೆ ಎಂಬ ಕುತೂಹಲವೂ ಕ್ರೀಡಾಭಿಮಾನಿಗಳಲ್ಲಿದೆ.