SC,ST ಮೀಸಲಾತಿ ಹೆಚ್ಚಳದ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ

Prasthutha|

ಬೆಂಗಳೂರು: ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು ಸುಗ್ರೀವಾಜ್ಞೆ– 2022’ ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಭಾನುವಾರ ಅಂಕಿತ ಹಾಕಿದ್ದಾರೆ.

- Advertisement -

ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿಯ ಸುಗ್ರೀವಾಜ್ಞೆಯನ್ನು ಸಿದ್ಧಪಡಿಸಿತ್ತು. ಇದಕ್ಕೆ ರಾಜ್ಯಪಾಲರ ಅಂಕಿತ ದೊರೆತ ಬೆನ್ನಲ್ಲೇ ಸರಕಾರದಿಂದ ವಿಶೇಷ ರಾಜ್ಯಪತ್ರವನ್ನು ಹೊರಡಿಸಲಾಗಿದೆ.

ಮೀಸಲಾತಿ ಪ್ರಮಾಣ ಶೇ 50 ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ರಾಜ್ಯದಲ್ಲಿ ಈಗಾಗಲೇ ಶೇ 50 ರಷ್ಟು ಮೀಸಲಾತಿ ಇದೆ. ಸುಗ್ರೀವಾಜ್ಞೆ ಜಾರಿಯಾದರೆ ಈ ಪ್ರಮಾಣ ಶೇ 56 ರಷ್ಟು ಆಗಲಿದೆ. ಈ ಮಿತಿಯನ್ನು ಮೀರದೆ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಒಟ್ಟು ಶೇ 6 ರಷ್ಟು ಹೆಚ್ಚಿಸಲು ಹೇಗೆ ಸಾಧ್ಯ ಎಂಬ ಮಾಹಿತಿಯನ್ನು ಸುಗ್ರೀವಾಜ್ಞೆಯಲ್ಲಿ ವಿವರಿಸಿಲ್ಲ ಎಂದು ಸಂಸದೀಯ ವ್ಯವಹಾರಗಳ ಇಲಾಖೆಯ ಮೂಲಗಳು ತಿಳಿಸಿವೆ.

- Advertisement -

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳವು ರಾಜ್ಯ ಸರ್ಕಾರದ ಅಥವಾ ಅನುದಾನಿತ ಯಾವುದೇ ಶಾಲೆ, ಕಾಲೇಜು ಅಥವಾ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಅವಕಾಶಕ್ಕೆ ಅನ್ವಯ ಆಗಲಿದೆ. ರಾಜ್ಯ ಸರ್ಕಾರಿ ಅಂದರೆ, ಸರ್ಕಾರ, ವಿಧಾನಮಂಡಲ, ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ನಿಗಮ ಅಥವಾ ಕಂಪನಿ. ಸಾರ್ವಜನಿಕ ಸಂಸ್ಥೆಗಳು ಅಂದರೆ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಯಾದ ಸಹಕಾರ ಸಂಘಗಳು, ಸರ್ಕಾರಿ ಅಥವಾ ಅನುದಾನಿತ ಶೈಕ್ಷಣಿಕ ಸಂಸ್ಥೆಗಳು, ಕಂಪನಿ ಕಾಯ್ದೆಗಳಡಿ ಬರುವ ಸರ್ಕಾರಿ ಕಂಪನಿ, ಸ್ಥಳೀಯ ಪ್ರಾಧಿಕಾರ, ಸರ್ಕಾರದ ಒಡೆತನ ಅಥವಾ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಗಳಲ್ಲಿ ನೇಮಕಾತಿ ಮತ್ತು ಹುದ್ದೆಗಳಿಗೆ ಅನ್ವಯ ಆಗಲಿದೆ.

ಮೀಸಲಾತಿ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಮೀಸಲಾತಿ ಪ್ರಮಾಣ ಹೆಚ್ಚಿಸಿ ನಮ್ಮ ಸರ್ಕಾರ ಬದ್ಧತೆಯಿಂದ ನಡೆದುಕೊಂಡಿದೆ. ಎಸ್ಸಿ,ಎಸ್ಟಿ ಸಮುದಾಯಕ್ಕೆ ದೀಪಾವಳಿ ಕೊಡುಗೆ ಕೊಟ್ಟಿದೆ ಎಂದು ಹೇಳಿದ್ದಾರೆ.



Join Whatsapp