ಚಾಮರಾಜನಗರ: ಶನಿವಾರ ಗ್ರಾಮೀಣ ಪ್ರದೇಶಗಳ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ವಸತಿ ಮೂಲಸೌಕರ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಹಿಳೆಯ ಕೆನ್ನೆಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಕೆಂಪಮ್ಮ ಪ್ರತಿಕ್ರಿಯೆ ನೀಡಿದ್ದು, ನನಗೆ ಸಚಿವರು ಹೊಡೆದಿಲ್ಲ, ಭಾವುಕಳಾದಾಗ ನನ್ನನ್ನು ಸಮಾಧಾನಪಡಿಸಿದರು ಎಂದು ಹೇಳಿದ್ದಾರೆ.
ಸಚಿವರ ಕಪಾಳಮೋಕ್ಷ ಪ್ರಕರಣ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದಾದ ನಂತರ ಬಿಜೆಪಿ ಯುವ ಮುಖಂಡ ಪ್ರಣಯ್ ಎಂಬವರ ಜೊತೆ ವೀಡಿಯೋಗೆ ಪ್ರತಿಕ್ರಿಯಿಸಿರುವ ಮಹಿಳೆ, ಪದೇ ಪದೆ ಸಚಿವರ ಕಾಲಿಗೆ ನಮಸ್ಕರಿಸುತ್ತಿದ್ದಾಗ ಬೇಡ ಎಂದು ತಿಳಿಸಿದರು. ಆ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಭಾವುಕಳಾದೆ. ತಕ್ಷಣ ಸಚಿವರು ನನ್ನನ್ನು ಸಮಾಧಾನಪಡಿಸಿ, ನಿನಗೆ ವಸತಿ ಕಲ್ಪಿಸಿ ಕೊಡುವುದಾಗಿ ಹೇಳಿದರು. ಅವರು ನನಗೆ ಒಳ್ಳೆಯದು ಮಾಡಿದ್ದಾರೆಯೇ ಹೊರತು ಕೆಟ್ಟದು ಮಾಡಿಲ್ಲ ಎಂದು ಹೇಳಿದ್ದಾರೆ.