ಮಾಮೂಲು ಕೇಸು ಹಾಕಿದ ಠಾಣಾಧಿಕಾರಿಗಳ ವಿರುದ್ಧ ಕರ್ತವ್ಯಲೋಪಕ್ಕಾಗಿ ಶಿಸ್ತುಕ್ರಮ ಕೈಗೊಳ್ಳಿ
ಪುತ್ತೂರು: ಕಾಣಿಯೂರು ಬಳಿಯಲ್ಲಿ ಬಟ್ಟೆ ವ್ಯಾಪಾರಿಗಳ ಮೇಲೆ ನಡೆದ ಭೀಕರ ಹಲ್ಲೆಯನ್ನು ದ. ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ತೀವ್ರವಾಗಿ ಖಂಡಿಸಿದೆ. ಸಂಘ ಪರಿವಾರದ ಈ ಭೀಭತ್ಸ ಘಟನೆಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ದ. ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ವ್ಯಾಪಾರಿಗಳಾದ ರಫೀಕ್, ರಮೀಝ್ ಎಂಬವರ ಮೇಲೆ ಎರಡು ಗಂಟೆಗಳ ಕಾಲ ಹಲ್ಲೆ ನಡೆದಿದೆ. ಅವರ ಸೊಂಟದ ಮೇಲೆ ಸಂಘ ಪರಿವಾರದ ದುಷ್ಕರ್ಮಿಗಳು ಬೈಕ್ ಹಾಯಿಸಿ ವಿಕೃತಿ ಮೆರೆದಿದ್ದಾರೆ. ಪ್ರದೇಶದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರೂ ಸೇರಿ ಈ ಹಲ್ಲೆ ನಡೆಸಿದ್ದಾರೆ ಎಂಬುದೂ ಗಮನಾರ್ಹ. ರೌಡಿ ಶೀಟರ್ ಆಗಿರುವ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನನ್ನು ಸೇರಿದಂತೆ ಎಲ್ಲಾ ಕಿಡಿಕೇಡಿಗಳ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಂಘ ಪರಿವಾರದ ಪ್ರಸಾದ್ ಮೊದಲಾದವರು ಹಲ್ಲೆ ನಡೆಸಿದ್ದು ವೀಡಿಯೋದಲ್ಲಿ ಸೆರೆಯಾಗಿದೆ. ಮಾರಣಾಂತಿಕ ಹಲ್ಲೆ ನಡೆಸಿ ಮೊದಲು ಕಳ್ಳತನ ಎಂದರು, ಆನಂತರ ಮಾನಭಂಗ ಯತ್ನ ಎಂದರು. ಬ್ಯಾರಿ ಎಂದು ಬೈದು ಹೊಡೆದಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಮುಸ್ಲಿಮರು ಎಂಬ ಕಾರಣಕ್ಕೆ ಮಾತ್ರ ಈ ಹಲ್ಲೆ ನಡೆದಿದೆ. ಆದರೆ ಯಾರನ್ನೂ ಬಂಧಿಸದೆ ಮಾಮೂಲು ಮೊಕದ್ದಮೆ ಹೂಡಿರುವ ಪೊಲೀಸರ ನಡೆ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು,
ಓವರ್ ಟೇಕ್ ಪ್ರಕರಣವನ್ನು ತಲ್ವಾರ್ ದಾಳಿ ಎಂದ ಬೆಳ್ತಂಗಡಿ ಶಾಸಕರ ಪ್ರಕರಣವನ್ನು ಸಿಐಡಿಗೆ ವಹಿಸಿದವರು, ಈ ಗಂಭೀರ ಪ್ರಕರಣವನ್ನೂ ಸಿಬಿಐಗೆ ವಹಿಸಬೇಕಾಗಿದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೂಡಲೇ ಸಂತ್ರಸ್ತರ ಶರೀರದ ಮೇಲೆ ಆದ ಗಾಯಗಳನ್ನು ಪರಿಶೀಲಿಸಬೇಕು. ಬಿಜೆಪಿ ಗೂಂಡಾಗಳು ಹೀಗೆ ಹೊಡೆಯುವುದಾದರೆ ವ್ಯಾಪಾರಿಗಳು ವ್ಯಾಪಾರ ಮಾಡುವುದು ಹೇಗೆ, ಅವರು ತಪ್ಪೇ ಮಾಡಿದ್ರೂ ಪೋಲೀಸರ ಕೆಲಸವನ್ನು ಬಿಜೆಪಿ ಗೂಂಡಾಗಳು ಮಾಡುವುದಾದರೆ ಪೋಲೀಸರು ಏಕೆ ಎಂದು ಶಾಹುಲ್ ಪ್ರಶ್ನಿಸಿದರು
ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿದ್ದರೆ ಬೆಳ್ಳಾರೆ ಪೋಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸುತ್ತೇವೆ. ಇಂದು ಪೋಲೀಸು ವರಿಷ್ಠರಿಗೆ ಮನವಿ ಸಲ್ಲಿಸುತ್ತೇವೆ. ಕ್ರೂರ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಕರ್ತವ್ಯ ಲೋಪ. ಆದುದರಿಂದ ಬೆಳ್ಳಾರೆ ಠಾಣಾಧಿಕಾರಿಗಳ ಮೇಲೂ ಶಿಸ್ತುಕ್ರಮವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಬಿತಾ ಮಿಸ್ಕಿತ್, ಸಂಶುದ್ದೀನ್, ಯು. ಇ. ಇಬ್ರಾಹಿಂ, ಮಹಿಯದ್ದಿ, ಇಸಾಕ್ ಸಾಲ್ಮರ, ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.