ಮುಂಬೈ: ಅಪ್ರಾಪ್ತ ಬಾಲಕನ ಮೇಲೆ ನಡೆದ ಲೈಂಗಿಕ ದೌರ್ಜನಕ್ಕೆ ಸಂಬಂಧಿಸಿ ಆರ್ಚ್ ಬಿಷಪ್ ಒಳಗೊಂಡಂತೆ ಮೂವರು ಧರ್ಮಗುರುಗಳ ವಿರುದ್ಧ ಪುಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಕುಟುಂಬ ನ್ಯಾಯಕ್ಕಾಗಿ ತಿಂಗಳು ಗಟ್ಟಲೆ ಪೊಲೀಸ್ ಠಾಣೆಗೆ ಅಲೆದಾಡಿದ ಹೊರತಾಗಿಯೂ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗಿರುವುದಿಲ್ಲ. ಈ ಬಗ್ಗೆ ಮಾನವ ಹಕ್ಕುಗಳ ಸಮಿತಿಯವರ ಮಧ್ಯಪ್ರವೇಶದಿಂದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ ಸೆಪ್ಟೆಂಬರ್’ನಲ್ಲಿ 15ರ ಹರೆಯದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಘಟನೆಯಲ್ಲಿ ಪ್ರಮುಖ ಆರೋಪಿಯಾದ ಫಾದರ್ ವಿನ್ಸೆಂಟ್ ಪಿರೇರಾ ಅವರು ಈ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು. ಈ ಹಿಂದೆ ಸೈಂಟ್ ಪ್ಯಾಟ್ರಿಕ್ ಹೈಸ್ಕೂಲ್’ನ ಪ್ರಾಂಶುಪಾಲ ಪಿರೇರಾ ಅವರು 8ನೇ ತರಗತಿಯ ವಿದ್ಯಾರ್ಥಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಶೋಷಣೆಗೊಳಪಡಿಸಿದ್ದರು ಎಂದು ದೂರಲಾಗಿತ್ತು. ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣದಲ್ಲಿ ಅವರು 18 ತಿಂಗಳು ಯೆರವಾಡ ಜೈಲಿನಲ್ಲಿದ್ದರು.
ಈ ಪ್ರಕರಣದ ಇತರ ಆರೋಪಿಗಳಾದ ಪುಣೆ ಡಯಾಸಿಸ್ ಎಂಬಲ್ಲಿನ ಬಿಷಪ್ ಥಾಮಸ್ ದಬ್ರೆ, ಬಾಂಬೆಯ ಆರ್ಚ್ ಬಿಷಪ್ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಾಸ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಲಾಗಿದೆ.