ಮಂಗಳೂರು: ಬೆಂಗಳೂರಿಗೆ ಹೊರಟಿದ್ದ ಉಪನ್ಯಾಸಕಿಯೊಬ್ಬರು ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿ ಹೃದಯಾಘಾತಕ್ಕೀಡಾದ ವ್ಯಕ್ತಿಯ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಮಂಗಳೂರು ವಿ.ವಿ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಬಿ.ಸಿ.ರೋಡು ನಿವಾಸಿ ಹೇಮಾವತಿ ಅವರು ಸೆ. 28ರ ರಾತ್ರಿ ಬಂಟ್ವಾಳದಿಂದ ಬೆಂಗಳೂರಿನಲ್ಲಿರುವ ಮಗಳ ಮನೆಗೆ ತೆರಳಲು ರೈಲು ನಿಲ್ದಾಣ ಕಾಯುತ್ತಿದ್ದರು.
ರೈಲು ಆಗಮಿಸುವಷ್ಟರಲ್ಲಿ ಹೃದಯಾಘಾತಗೊಂಡು ಬಿದ್ದ ವ್ಯಕ್ತಿಯ ರಕ್ಷಣೆಗೆ ಮುಂದಾದ ಉಪನ್ಯಾಸಕಿ ತಾವು ಹೋಗಬೇಕಿದ್ದ ರೈಲನ್ನು ತೊರೆದು ಆಟೋ ರಿಕ್ಷಾ ಮೂಲಕ ಬಿ.ಸಿ.ರೋಡಿನ ಆಸ್ಪತ್ರೆಗೆ ಆ ವ್ಯಕ್ತಿಯನ್ನು ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಆ ವ್ಯಕ್ತಿಯ ಆರೋಗ್ಯ ವಿಚಾರಿಸಿ ಹೇಮಾವತಿ ಅವರು ಬಸ್ಸಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಈ ವಿಚಾರ ಹೆಚ್ಚು ಪ್ರಚಾರವಾಗದೇ ಅಲ್ಲಿಗೇ ಮುಕ್ತಾಯಗೊಂಡಿತ್ತು.
ಆದರೆ ಅ. 17ರಂದು ತಮ್ಮ ತಾಯಿಯನ್ನು ಕರೆದುಕೊಂಡು ಮಂಗಳೂರು ಕೆಎಂಸಿ ಆಸ್ಪತ್ರೆಯ ಡಾ| ಪದ್ಮನಾಭ ಕಾಮತ್ ಅವರ ಬಳಿಗೆ ಬಂದಿದ್ದ ಹೇಮಾವತಿ ಅವರಿಗೆ ಆಶ್ಚರ್ಯ ಕಾದಿತ್ತು. ಅಂದು ತನ್ನಿಂದ ರಕ್ಷಿಸಲ್ಪಟ್ಟ ವ್ಯಕ್ತಿಯೂ ಚೇತರಿಸಿಕೊಂಡು ವೈದ್ಯರ ಬಳಿಗೆ ಬಂದಿದ್ದರು.
ತಕ್ಷಣವೇ ಆ ವ್ಯಕ್ತಿಯು ಡಾ| ಕಾಮತ್ ಅವರ ಬಳಿ ಅಂದು ತನ್ನನ್ನು ಕಾಪಾಡಿದ್ದು ಇದೇ ಮಹಿಳೆ ಎಂದು ಹೇಮಾವತಿ ಅವರ ಪರಿಚಯ ಮಾಡಿಕೊಟ್ಟರು. ಕೂಡಲೇ ಡಾ| ಕಾಮತ್ ಅವರು ಉಪನ್ಯಾಸಕಿಯ ಮಾನವೀಯ ಕಾರ್ಯವನ್ನು ಮೆಚ್ಚಿ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.