ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಎಲ್ಲಾ 12 ಪಂದ್ಯಗಳು ಮುಕ್ತಾಯಗೊಂಡಿದ್ದು, ಶನಿವಾರದಿಂದ ಪ್ರಧಾನ ಸುತ್ತು, ʻಸೂಪರ್ 12ʼ ಆರಂಭವಾಗಲಿದೆ. ಅಕ್ಟೋಬರ್ 16ರಿಂದ ಆರಂಭವಾಗಿದ್ದ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದ 8 ತಂಡಗಳಲ್ಲಿ 4 ತಂಡಗಳು ಮುಂದಿನ ಸುತ್ತಿಗೆ ತೇರ್ಗಡೆಯಾಗಿದ್ದು, 4 ತಂಡಗಳು ಕೂಟದಿಂದ ನಿರ್ಗಮಿಸಿದೆ.
ನಮೀಬಿಯಾ ನೆದರ್ಲ್ಯಾಂಡ್ಸ್, ಶ್ರೀಲಂಕಾ ಯುಎಇ, ಐರ್ಲೆಂಡ್, ಸ್ಕಾಟ್ಲ್ಯಾಂಡ್, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಸೇರಿದಂತೆ ಒಟ್ಟು 8 ತಂಡಗಳು ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿತ್ತು. ಇದರಲ್ಲಿ ಎ ಗುಂಪಿನಿಂದ ಐರ್ಲೆಂಡ್ ಮತ್ತು ಶ್ರೀಲಂಕಾ ಹಾಗೂ ಬಿ ಗುಂಪಿನಿಂದ ಜಿಂಬಾಬ್ವೆ ಮತ್ತು ನೆದರ್ಲ್ಯಾಂಡ್ ತಂಡಗಳು ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದೆ.
ಸೂಪರ್ 12 ಗುಂಪು 1
ಆಸ್ಟ್ರೇಲಿಯ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಇಂಗ್ಲೆಂಡ್ ಶ್ರೀಲಂಕಾ, ಐರ್ಲೆಂಡ್
ಸೂಪರ್ 12 ಗುಂಪು 2
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ , ನೆದರ್ಲೆಂಡ್
ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಶನಿವಾರದಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ. ಪ್ರತನಿತ್ಯ ಎರಡು ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಲಿದೆ. ಅದೇ ದಿನ ನಡೆಯುವ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಅಫ್ಘಾನಿಸ್ತಾನ ಮುಖಾಮುಖಿಯಾಗಲಿದೆ. ಭಾನುವಾರದಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಹೈ ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ತಾನ ಮುಖಾಮುಖಿಯಾಗಲಿದೆ.
ನವೆಂಬರ್ 9ರಂದು ಮೊದಲ ಮತ್ತು 10ರಂದು ಎರಡನೇ ಸೆಮಿಫೈನಲ್ ಪಂದ್ಯ ಕ್ರಮವಾಗಿ ಸಿಡ್ನಿ ಮತ್ತು ಅಡಿಲೇಡ್ನಲ್ಲಿ ನಡೆಯಲಿದೆ. ಚಾಂಪಿಯನ್ ಪಟ್ಟಕ್ಕಾಗಿ ನವೆಂಬರ್ 13ರಂದು ಮೆಲ್ಬೋರ್ನ್ ಮೈದಾನದಲ್ಲಿ ಫೈನಲ್ ಫೈಟ್ ನಡೆಯಲಿದೆ.