ವಿಜಯಪುರ: ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದ ಮಳಿಗೆಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, 30 ಕೆ.ಜಿ ತುಪ್ಪ ವಶಕ್ಕೆ ಪಡೆದ ಘಟನೆ ವಿಜಯಪುರದಲ್ಲಿ ನಡೆದಿದೆ.
ನಗರದ ಸಾಯಿ ಪಾರ್ಕ್ ನ ಪ್ರಾರ್ಥನಾ ಶಾಲೆಯ ಪಕ್ಕದಲ್ಲಿರುವ ಶ್ರೀ ಬಾಲಾಜಿ ಹಾಲಿನ ಡೈರಿ ಎಂಬ ಮಳಿಗೆಯಲ್ಲಿ ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ನಕಲಿ ತುಪ್ಪದ ಬಾಟಲ್, ಸ್ಟಿಕರ್ ಸೇರಿದಂತೆ ಪ್ಯಾಕಿಂಗ್ ಸಾಮಾಗ್ರಿ ಹಾಗೂ ಬಿಲ್ ಪುಸ್ತಕಗಳು ಲಭ್ಯವಾಗಿವೆ. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಅಂಗಡಿ ಮಾಲೀಕ ರವಿ ನಿಂಗನಗೌಡ ಬಿರಾದರ ನನ್ನು ಅಧಿಕಾರಿಗಳು ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ವಶಪಡಿಸಿಕೊಂಡ ತುಪ್ಪ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.