ನ್ಯಾಯಾಲಯದ ಆದೇಶದಂತೆ ಕೊರಟಗೆರೆ ಪಟ್ಟಣ ಪಂಚಾಯಿತಿ ಪೀಠೋಪಕರಣ ಜಪ್ತಿ

Prasthutha|

ತುಮಕೂರು: ಹೇಮಾವತಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ 2009-10ರಲ್ಲಿ ಜೆಟ್ಟಿಅಗ್ರಹಾರ ರೈತರಿಂದ ಭೂಸ್ವಾಧೀನ ಪಡಿಸಿಕೊಂಡ ಜಮೀನಿನ ಭೂಪರಿಹಾರವನ್ನು 2018 ರಲ್ಲಿ ನ್ಯಾಯಾಲಯದ ಆದೇಶದ ನಂತರವೂ ನೀಡದಿರುವ ಪರಿಣಾಮ ಪಟ್ಟಣ ಪಂಚಾಯತ್ ನ ಪಿಠೋಪಕರಣ ವಶ ಪಡಿಸಿಕೊಳ್ಳುವಂತೆ ಮಧುಗಿರಿ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ.

- Advertisement -

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರೈತರ 30ಗುಂಟೆ ಜಮೀನನ್ನು 2009ರಲ್ಲೇ ಹೇಮಾವತಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. 2018ರಲ್ಲೇ ಅಗ್ರಹಾರ ರೈತರಿಗೆ ತಕ್ಷಣ ಭೂಪರಿಹಾರ ನೀಡುವಂತೆ ಕೊರಟಗೆರೆ ಪಪಂಗೆ ಮಧುಗಿರಿ ಸಿವಿಲ್ ನ್ಯಾಯಾಲಯವು ಆದೇಶ ಮಾಡಿದ್ದರೂ, 12 ವರ್ಷಗಳ ಕಾಲ ರೈತರಿಗೆ ಪರಿಹಾರ ನೀಡದೆ ಕಚೇರಿಗೆ ರೈತರನ್ನು ಅಲೆದಾಡಿಸಿದ ಹಿನ್ನೆಲೆ  ಪರಿಹಾರಕ್ಕಾಗಿ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು.

2018ರಲ್ಲಿ ರೈತರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದರೂ ಸಹ ಪಟ್ಟಣ ಪಂಚಾಯತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಕಾರಣ ನ್ಯಾಯಾಲಯದ ಸಿಬ್ಬಂದಿಗಳ ಮತ್ತು ಪೊಲೀಸ್ ಇಲಾಖೆಯ ಉಪಸ್ಥಿತಿಯಲ್ಲಿ ಪಟ್ಟಣ ಪಂಚಾಯತಿ ಪೀಠೋಪಕರಣಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆಯಲು ಮಧುಗಿರಿ ಸಿವಿಲ್ ನ್ಯಾಯಾಲಯ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

- Advertisement -

ರೈತರಿಗೆ ಜಮೀನು ಸ್ವಾಧೀನದ ಪರಿಹಾರ ನೀಡುವಲ್ಲಿ ಕೊರಟಗೆರೆ ಪಪಂ ವಿಳಂಬ ಮಾಡಿದ ಪರಿಣಾಮ  ಮಧುಗಿರಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಕೊರಟಗೆರೆ ಪಪಂಯ ಪಿಠೋಪಕರಣವನ್ನು ಜಪ್ತಿ ಮಾಡಿದ್ದೇವೆ ಎಂದು ಕೊರಟಗೆರೆಯ ಸಿವಿಲ್ ನ್ಯಾಯಾಲಯದ ಮಂಜುನಾಥ ಅಮೀನ್ ತಿಳಿಸಿದರು.

ಕೊರಟಗೆರೆ ಸಿವಿಲ್ ನ್ಯಾಯಾಲಯದ ಅಮೀನರಾದ ಮಂಜುನಾಥ ಮತ್ತು ಪರಮೇಶ್ವರಯ್ಯ ನೇತೃತ್ವದಲ್ಲಿ ಪಪಂ ಕಚೇರಿಯ ಪಿಠೋಪಕರಣವನ್ನು ವಶಕ್ಕೆ ಪಡೆಯಲಾಗಿದ್ದು. ಇದೇ ಸಂದರ್ಭದಲ್ಲಿ ಪಪಂಯ ಮುಖ್ಯಾಧಿಕಾರಿ ಭಾಗ್ಯ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.



Join Whatsapp