ಪುಣೆ: ಒಳ ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಮೂವರು ಪೌರಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮೃತರನ್ನು ನಿತಿನ್ ಪ್ರಭಾರ್ ಗೊಂಡ್ (45 ವರ್ಷ), ಗಣೇಶ್ ಭಲೇರಾವ್ (28 ವರ್ಷ) ಹಾಗೂ ಸತೀಶ್ ಕುಮಾರ್ ಚೌಧರಿ ಎಂದು ಗುರುತಿಸಲಾಗಿದೆ.
ಕಾರ್ಮಿಕರು ಹೌಸಿಂಗ್ ಸೊಸೈಟಿಯಲ್ಲಿರುವ ಒಳ ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಬೆಳಿಗ್ಗೆ 6 ಗಂಟೆ ಸುಮಾರಿಗೆ ಮೂವರು ಕಾರ್ಮಿಕರು ಸೊಲಾಸಿಯಾ ಹಂತ II ಹೌಸಿಂಗ್ ಸೊಸೈಟಿಯ ಒಳಚರಂಡಿಯೊಳಗೆ ಪ್ರವೇಶಿಸಿದರು. ಒಂದು ಗಂಟೆಯ ನಂತರವೂ ಕಾರ್ಮಿಕರಿಂದ ಏನೂ ಪ್ರತಿಕ್ರಿಯೆ ಬರದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ ಎಂದು ಪುಣೆ ಮೆಟ್ರೋಪಾಲಿಟನ್ ರೀಜನ್ ಡೆವಲಪ್ಮೆಂಟ್ ಅಥಾರಿಟಿ (ಪಿಎಂಆರ್ ಡಿಎ) ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಕಾರ್ಮಿಕರ ಶವಗಳನ್ನು ಚರಂಡಿಯಿಂದ ಹೊರಗೆ ತೆಗೆಯಲಾಗಿದೆ ಎಂದು ಪಿಎಂಆರ್ ಡಿಎ ಅಧಿಕಾರಿ ವಿಜಯ್ ಹೇಳಿದ್ದಾರೆ.