ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ತೆರೆ| ಭಾರತೀಯ ರೈಲ್ವೇಸ್ ತಂಡ ಸಮಗ್ರ ಚಾಂಪಿಯನ್‌

Prasthutha|

61ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಬುಧವಾರ ತೆರೆಬಿದ್ದಿದೆ. ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ನಡೆದ ಕೂಟದಲ್ಲಿ ಭಾರತೀಯ ರೈಲ್ವೇಸ್ ತಂಡ ಸಮಗ್ರ ಚಾಂಪಿಯನ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪುರುಷರ ವಿಭಾಗದಲ್ಲಿ ಸರ್ವಿಸಸ್ ಮತ್ತು ಮಹಿಳಾ ವಿಭಾಗದಲ್ಲಿ ರೈಲ್ವೇಸ್ ತಂಡಗಳು ಪ್ರಶಸ್ತಿ ಗೆದ್ದು ಸಂಭ್ರಮಿಸಿತು.

- Advertisement -

1 ಚಿನ್ನ, 3 ಬೆಳ್ಳಿ ಮತ್ತು 6 ಕಂಚು ಸೇರಿದಂತೆ ಒಟ್ಟು 10 ಪದಕಗಳೊಂದಿಗೆ ಕರ್ನಾಟಕ ಅಥ್ಲೆಟಿಕ್ಸ್ ತಂಡ ಕೂಟದಲ್ಲಿ 5ನೇ ಸ್ಥಾನಗಳಿಸಿತು. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ (ಕೆಎಎ) ಆಶ್ರಯದಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ31 ತಂಡಗಳ ಒಟ್ಟು 868 ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. ಸರ್ವಿಸಸ್ ತಂಡವನ್ನು ಪ್ರತಿನಿಧಿಸಿದ ತಜೇಂದರ್‌ಪಾಲ್ ಸಿಂಗ್ ತೂರ್, ಪುರುಷರ ವಿಭಾಗದಲ್ಲಿ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿಯನ್ನು ಪಡೆದರೆ, ಮಹಿಳೆಯರ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದ ಅಥ್ಲೀಟ್‌ ರೈಲ್ವೇಸ್‌ನ ಜ್ಯೋತಿ ಯರ್ರಾಜಿ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿಯನ್ನು ತನ್ನದಾಗಿಸಿದರು.

ಮಹಿಳೆಯರ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಸಿಂಚಲ್ ಕಾವೇರಮ್ಮ ಬೆಳ್ಳಿ ಪದಕ ಸೇರಿದಂತೆ ಕೂಟದ ಅಂತಿಮ ದಿನವಾದ ಬುಧವಾರ ಕರ್ನಾಟಕ, ಮೂರು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು.‌ ಪುರುಷರ 200 ಮೀಟರ್ ಓಟದಲ್ಲಿ ಅಭಿನ್ ದೇವಾಡಿಗ (20.97 ಸೆಕೆಂಡ್‌) ಕಂಚು ಗೆದ್ದರು.

- Advertisement -

4X400 ಮೀ. ರಿಲೇಯಲ್ಲಿ ಕರ್ನಾಟಕದ ಪುರುಷ ಮತ್ತು ಮಹಿಳಾ ತಂಡಗಳು ಕಂಚಿನ ಪದಕ ಗೆದ್ದುಕೊಂಡವು. ಪುರುಷರ ತಂಡದಲ್ಲಿ ಎಂ. ಸಿದ್ದಪ್ಪ ಹೆಳವಿ, ಗೌರಿಶಂಕರ್ ವಿ, ಜೀವನ್ ಕೆ.ಎಸ್‌ ಮತ್ತು ನಿಹಾಲ್ ಜೋಯಲ್ ಇದ್ದರು. ಮಹಿಳಾ ತಂಡವು ಸಿಂಚಲ್ ಕಾವೇರಮ್ಮ, ಅರ್ಪಿತಾ ಇ.ಬಿ, ಇಂಚರ ಎನ್.ಎಸ್‌ ಮತ್ತು ಲಿಖಿತಾ ಎಂ. ಅವರನ್ನು ಒಳಗೊಂಡಿತ್ತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಥ್ಲೀಟ್‌ ಅಂಜು ಬಾಬಿ ಜಾರ್ಜ್, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜ್, ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು.



Join Whatsapp