ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀ ವಿರುದ್ಧ 3ನೇ ಎಫ್ ಐಆರ್ ದಾಖಲಾಗಿದೆ.
ಬಾಲ ನ್ಯಾಯ ಕಾಯ್ದೆ 2015ನ್ನು ಉಲ್ಲಂಘಿಸಿದ್ದಕ್ಕಾಗಿ ಚಿತ್ರದುರ್ಗ ಗ್ರಾಮೀಣ ಪೊಲೀಸರು ಮಂಗಳವಾರ ಮೂರನೇ ಎಫ್ ಐಆರ್ ದಾಖಲಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡಿದ ದೂರಿನ ಆಧಾರದಲ್ಲಿ ಮುರುಘಾ ಶ್ರೀ, ಕಾರ್ಯದರ್ಶಿ ಪರಮಶಿವಯ್ಯ, ಹಾಸ್ಟೆಲ್ ವಾರ್ಡನ್ ರಶ್ಮಿ ಮತ್ತು ಮಡಿಲು ದತ್ತು ಕೇಂದ್ರದ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಠವು ನಡೆಸುತ್ತಿರುವ ವಸತಿ ನಿಲಯದ ಆವರಣದಲ್ಲಿ ಪತ್ತೆಯಾದ ನಾಲ್ಕೂವರೆ ವರ್ಷದ ಬಾಲಕಿ ಹಾಗೂ 16 ವರ್ಷದ ಬಾಲಕಿಯ ವಿವರಗಳನ್ನು ಮಠವು ಉದ್ದೇಶಪೂರ್ವಕವಾಗಿ ಮರೆಮಾಚಿದೆ ಮತ್ತು ಈ ಮೂಲಕ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 32 ಅನ್ನು ಉಲ್ಲಂಘಿಸಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ದೂರಿನಲ್ಲಿ ಆರೋಪಿಸಿದೆ.