ಪ್ಯಾರಿಸ್: ರಿಯಲ್ ಮ್ಯಾಡ್ರಿಡ್ ಮತ್ತು ಫ್ರಾನ್ಸ್ ನ ಸ್ಟ್ರೈಕರ್ ಕರೀಮ್ ಬೆಂಝಿಮಾ, ಪ್ರತಿಷ್ಠಿತ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತರಾಗಿದ್ದಾರೆ. ಫ್ರಾನ್ಸ್ ಫುಟ್ಬಾಲ್ ಮ್ಯಾಗಝಿನ್ʼ ನೀಡುವ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಬೆಂಝಿಮಾ, ಇದೇ ಮೊದಲ ಬಾರಿಗೆ ಗೆದ್ದಿದ್ದಾರೆ. ಮಹಿಳಾ ವಿಭಾಗದಲ್ಲಿ ಬಾರ್ಸಿಲೋನಾ ತಂಡದ ಅಲೆಕ್ಸಿಯಾ ಪುಟೆಲ್ಲಾಸ್ ಸತತ ಎರಡನೇ ಬಾರಿಗೆ ಬ್ಯಾಲನ್ ಡಿ’ಓರ್ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು.
ಪ್ಯಾರಿಸ್ ನ ಚಾಟೆಲೆಟ್ ಥಿಯೇಟರ್ ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಬೆಂಝಿಮಾ, ಇದು ʻಜನರ ಬ್ಯಾಲನ್ ಡಿ’ಓರ್ʼ ಎಂದು ವಿಶ್ಲೇಷಿಸಿದರು. ನನ್ನ ಹೇಳಿಕೆ ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ. ನಾನು ಎಲ್ಲಿಂದ ಬಂದಿದ್ದೇನೆ ಎಂಬುದರ ಸೂಚಕವಾಗಿ ಹೇಳಿದ್ದೇನೆ ಎಂದರು.
ಕಳೆದ ಋತುವಿನಲ್ಲಿ ಚಾಂಪಿಯನ್ಸ್ ಲೀಗ್ ಮತ್ತು ಲಾ ಲೀಗ್ ಟೂರ್ನಿಯಲ್ಲಿ ಬೆಂಝಿಮಾ, ರಿಯಲ್ ಮ್ಯಾಡ್ರಿಡ್ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಮುನ್ನಡೆಸಿದ್ದರು. 46 ಪಂದ್ಯಗಳಲ್ಲಿ ಒಟ್ಟು 44 ಗೋಲುಗಳನ್ನು ಗಳಿಸಿ ಮಿಂಚಿದ್ದರು.
ನಾಮನಿರ್ದೇಶನಗೊಂಡಿದ್ದ ಒಟ್ಟು 30 ಆಟಗಾರರ ಪಟ್ಟಿಯಲ್ಲಿ ಸ್ಯಾಡಿಯೊ ಮಾನೆ ಎರಡನೇ, ಕೆವಿನ್ ಡಿ ಬ್ರೂಯ್ನೆ ಮೂರು ಹಾಗೂ ರಾಬರ್ಟ್ ಲೆವಾಂಡೋಸ್ಕಿ ನಾಲ್ಕನೇ ಸ್ಥಾನ ಪಡೆದರು. ಐದು ಬಾರಿಯ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ 20ನೇ ಸ್ಥಾನಕ್ಕೆ ಕುಸಿದರು. ಅಚ್ಚರಿ ಎಂಬಂತೆ 2005ರ ಬಳಿಕ ಇದೇ ಮೊದಲ ಬಾರಿಗೆ ಅಂತಿಮ 30 ಆಟಗಾರರ ಪಟ್ಟಿಯಿಂದ 7 ಬಾರಿಯ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ಲಿಯೋನೆಲ್ ಮೆಸ್ಸಿ ಹೆಸರನ್ನು ಕೈಬಿಡಲಾಗಿತ್ತು.
35 ವರ್ಷದ ಕರೀಮ್ ಬೆಂಝಿಮಾ, ಇಂಗ್ಲೆಂಡ್ನ ಸ್ಟಾನ್ಲಿ ಮ್ಯಾಥ್ಯೂಸ್ 1956 ರಲ್ಲಿ ಮೊಟ್ಟಮೊದಲ ಬ್ಯಾಲನ್ ಡಿ’ಓರ್ ಗೆದ್ದ ನಂತರದಲ್ಲಿ ಈ ಪ್ರಶಸ್ತಿ ಗೆಲ್ಲುತ್ತಿರುವ ಹಿರಿಯ ಆಟಗಾರನಾಗಿದ್ದಾರೆ. 1998ರಲ್ಲಿ ಝಿನೆದಿನ್ ಝಿದಾನ್ ಬಳಿಕ ಈ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುತ್ತಿರುವ ಫ್ರಾನ್ಸ್ನ ಎರಡನೇ ಆಟಗಾರ ಬೆಂಝಿಮಾ ಆಗಿದ್ದಾರೆ.
2009 ರಲ್ಲಿ ಬೆಂಝಿಮಾ ತಮ್ಮ 21ನೇ ವಯಸ್ಸಿನಲ್ಲಿ ಲಿಯಾನ್ ಕ್ಲಬ್ನಿಂದ ರಿಯಲ್ ಮ್ಯಾಡ್ರಿಡ್ ತಂಡವನ್ನು ಸೇರಿದ್ದರು. ಆ ಬಳಿಕ ಕೆಲ ವರ್ಷಗಳ ಕಾಲ ಕ್ಲಬ್ ತೊರೆದಿದ್ದ ಸ್ಟ್ರೈಕರ್, 2018ರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ನಿರ್ಗಮಿಸಿದ ನಂತರ ಮತ್ತೆ ಮ್ಯಾಡ್ರಿಡ್ ಗೆ ಮರಳಿದ್ದರು.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಟ್ವಿಟರ್ನಲ್ಲಿ ಬೆಂಝಿಮಾಗೆ ಅಭಿನಂದನೆ ಸಲ್ಲಿಸಿದ್ದಾರೆ.
ಫ್ರಾನ್ಸ್ ತಂಡ ಯುಇಎಫ್ ಎ ನೇಷನ್ಸ್ ಲೀಗ್ ಗೆದ್ದ ವೇಳೆ ತಂಡದಲ್ಲಿದ್ದ ಬೆಂಜಿಮಾ, ಆ ಬಳಿಕ ಸಹ ಆಟಗಾರ ಮ್ಯಾಥ್ಯೂ ವಾಲ್ಬ್ಯುನಾ ಒಳಗೊಂಡ ಸೆಕ್ಸ್ ಟೇಪ್ ಬ್ಲ್ಯಾಕ್ ಮೇಲ್ ಹಗರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಐದೂವರೆ ವರ್ಷಗಳ ಕಾಲ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದರು. 2018 ರಲ್ಲಿ ರಷ್ಯಾದಲ್ಲಿ ಫ್ರಾನ್ಸ್ ವಿಶ್ವವಿಜೇತರಾಗಿ ಹೊರಹೊಮ್ಮಿದ್ದ ವೇಳೆ ಬೆಂಝಿಮಾ ತಂಡದಲ್ಲಿರಲಿಲ್ಲ. ಆದರೆ ಕತಾರ್ ವಿಶ್ವಕಪ್ ಗೆಲ್ಲುವುದು ತನ್ನ ಮುಂದಿನ ಗುರಿ ಎಂದು ಖ್ಯಾತ ಸ್ಟ್ರೈಕರ್ ಹೇಳಿದ್ದಾರೆ.