ಶಿವಮೊಗ್ಗ: ಅನಧಿಕೃತವಾಗಿ ನಿರ್ಮಿಸಿದ್ದ ಹಕ್ಕಿಪಿಕ್ಕಿ ಜನಾಂಗದವರ ಕ್ಯಾಂಪಿನ ಗುಡಿಸಲುಗಳ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿದ್ದು, ಇದನ್ನು ವಿರೋಧಿಸಿ ನಿವಾಸಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಯಾವುದಕ್ಕೂ ಜಗ್ಗದ ಅಧಿಕಾರಿಗಳು ವಿರೋಧದ ನಡುವೆಯೂ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಶಿವಮೊಗ್ಗದ ಮಲ್ಲಿಗೆನಹಳ್ಳಿ ಸಮೀಪದ ಅಂಬೇಡ್ಕರ್ ಕಾಲೋನಿಯಲ್ಲಿ ಹಕ್ಕಿಪಿಕ್ಕಿ ಕ್ಯಾಂಪ್ ನವರು ಸುಮಾರು 8-10 ವರ್ಷಗಳಿಂದ ವಾಸವಾಗಿದ್ದಾರೆ. ಸರ್ವೆ ನಂಬರ್ 18 ಹಾಗೂ 19 ರಲ್ಲಿ ಸುಮಾರು 8.29 ಎಕರೆ ಪ್ರದೇಶ ತುಂಗಾ ಮೇಲ್ದಂಡೆ ಯೋಜನೆ ನೀರಾವರಿ ನಿಗಮಕ್ಕೆ ಸೇರಿದ್ದಾಗಿದೆ. ಹೀಗಾಗಿಯೇ ಅಧಿಕಾರಿಗಳು ಹಲವು ವರ್ಷಗಳಿಂದ ತೆರವು ಮಾಡುವಂತೆ ಸೂಚಿಸಿದ್ದರು. ಆದರೂ ಇಲ್ಲಿನ ನಿವಾಸಿಗಳು ಮನೆಗಳನ್ನು ತೊರೆಯದೇ ಇಲ್ಲಿಯೇ ಸುಮಾರು 250-300 ಕುಟುಂಬಗಳು ವಾಸವಾಗಿವೆ.
ಈಗ ಮತ್ತೆ ಅನಧಿಕೃತವಾಗಿ ನಿರ್ಮಿಸಿರುವ ಗುಡಿಸಲುಗಳ ತೆರವಿಗೆ ಹೈಕೋರ್ಟ್ ಆದೇಶಿಸಿದ್ದು, ಹೈಕೋರ್ಟ್ ಸೂಚನೆ ಮೇರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಇಂದು ತೆರವು ಮಾಡಲಾಗಿದೆ.