ಲಕ್ನೋ: ಫೇಸ್ಬು ಕ್ ಲೈವ್ ಮಾಡುವ ಉತ್ಸಾಹದಲ್ಲಿ 230 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸಿ ನಾಲ್ವರು ಯುವಕರು ದಾರುಣ ಅಂತ್ಯ ಕಂಡ ಘಟನೆ ಪೂರ್ವಾಂಚಲ ಎಕ್ಸ್ ಪ್ರೆಸ್ ಹೈವೇಯ ಸುಲ್ತಾನ್ ಪುರದಲ್ಲಿ ನಡೆದಿದೆ.
ಮೃತರನ್ನು ಬಿಹಾರದ ರೋಹ್ಟಾಸ್ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಡಾ.ಆನಂದ್ ಪ್ರಕಾಶ್ ಎಂಜಿನಿಯರ್ ದೀಪಕ್ ಕುಮಾರ್, ರಿಯಲ್ ಎಸ್ಟೇಟ್ ಉದ್ಯಮಿ ಅಖಿಲೇಶ್ ಸಿಂಗ್ ಮತ್ತು ಉದ್ಯಮಿ ಮುಖೇಶ್ ಎಂದು ಗುರುತಿಸಲಾಗಿದೆ. ಎಲ್ಲರೂ 35 ವರ್ಷದ ಆಸುಪಾಸಿನವರಾಗಿದ್ದಾರೆ.
ಫೇಸ್ಬುಕ್ ಲೈವ್ ನಲ್ಲಿ ಸಾಹಸ ನಡೆಸಲು ಪ್ರಯತ್ನಿಸಿ 230 ಕಿಲೋಮೀಟರ್ ವೇಗದಲ್ಲಿ ಚಲಾಯಿಸುತ್ತಿದ್ದ ವೇಳೆ ಬಿಎಂಡಬ್ಲ್ಯೂ ಕಾರು ಟ್ರಕ್ ಗೆ ಢಿಕ್ಕಿ ಹೊಡೆದಿದೆ. ನಾಲ್ವರ ದೇಹಗಳು ತುಂಡುತುಂಡಾಗಿ ಎಸೆಯಲ್ಪಟ್ಟಿದೆ.
ಫೇಸ್ಬುಕ್ ಲೈವ್ ನಲ್ಲಿ ಸಾಹಸ ನಡೆಸುತ್ತಿದ್ದ ನಾಲ್ವರ ಪೈಕಿ ಒಬ್ಬ ಸ್ಪೀಡ್ ಮೀಟರ್ ಇನ್ನೇನು ಕೆಲವೇ ಕ್ಷಣದಲ್ಲಿ 300 ಕಿಲೋಮೀಟರ್ ತಲುಪಲಿದೆ ಎಂದು ಹೇಳುತ್ತಿರುವುದು ರೆಕಾರ್ಡ್ ಆಗಿದ್ದು , ಆ ಇನ್ನೊಬ್ಬ ಅದಕ್ಕಿಂತ ಸ್ಪೀಡ್ ಆಗಿ ಹೋದರೆ ಆಗ ನಾವು ಸಾಯಬೇಕಾಗುತ್ತದೆ ಎಂದು ಹೇಳಿದ್ದೂ ರೆಕಾರ್ಡ್ ಆಗಿದೆ. ಭೀಕರವಾಗಿ ನಡೆದ ಅಪಘಾತದಲ್ಲಿ ನಜ್ಜುಗುಜ್ಜಾಗಿ ಅವರ ರಕ್ತಸಿಕ್ತ ದೇಹಗಳು ರಸ್ತೆಯಲ್ಲಿ ಚೂರು ಚೂರಾಗಿ ಬಿದ್ದ ದೃಶ್ಯಗಳೂ ಕೂಡ ಕಂಡುಬಂದಿದೆ.
ಈ ಘಟನೆಯ ಕುರಿತಾದ ಸಮಗ್ರ ತನಿಖೆಗೆ ಎಸ್ಪಿ ಸೋಮನ್ ಬರ್ಮಾ ಮುಂದಾಗಿದ್ದು, ತಲೆ ಮರೆಸಿಕೊಂಡಿರುವ ಟ್ರಕ್ ಚಾಲಕನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಕಾರಿನ ವೇಗದ ಚಾಲನೆಯ ಜೊತೆಗೆ ಟ್ರಕ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಆರೋಪ ಹೊರಿಸಲಾಗಿದೆ.