ಬೆಂಗಳೂರು: ರಾಜ್ಯ ವಕ್ಫ್ ಬೋರ್ಡ್ ಗೆ ಸೇರಿದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವಂತೆ ಈ ಹಿಂದೆ ಸಂಘಪರಿವಾರ ಸಂಘಟನೆಗಳು ವಿವಾದವೆಬ್ಬಿಸಿದ ಬಳಿಕ ಇದೀಗ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಅವಕಾಶಕ್ಕಾಗಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ರೀತಿಯೇ ಕನ್ನಡ ರಾಜ್ಯೋತ್ಸವ ಆಚರಿಸಲು ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಕೋರ್ಟ್ ಆದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಎರಡಕಷ್ಟೇ ಅನುಮತಿ ನೀಡಲಾಗಿತ್ತು. ಹೀಗಾಗಿ ಇದೀಗ ಸರ್ಕಾರ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ಕೋರಿ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಕೆ ಸಾಧ್ಯತೆ ಇದೆ.
ಕಂದಾಯ ಸಚಿವ ಆರ್.ಅಶೋಕ್ ನಮ್ಮ ಜೊತೆ ಮಾತನಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಚರಿಸುವಂತೆ ಸಲಹೆ ನೀಡಿದ್ದಾರೆ. ಒಕ್ಕೂಟದ ಕಡೆಯಿಂದ ಕನ್ನಡ ಸಾಹಿತ್ಯ ಪರಿಷತ್‍ನಿಂದ ಆಚರಣೆಗೆ ಒಪ್ಪಿಗೆ ಇದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆಗೂ ಚರ್ಚೆ ಮಾಡಿದ್ದೇವೆ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಹೇಳಿದರು.