ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಲ್ಲಿ ಭಾರೀ ಅಕ್ರಮ: ಭ್ರಷ್ಟಾಚಾರದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಭಾಗಿ- ಎಸ್.ಡಿ.ಪಿ.ಐ ಆರೋಪ

Prasthutha|

ಮೂಡಬಿದ್ರೆ: ಮಂಗಳೂರು ಮೂಡಬಿದ್ರೆ ಕಾರ್ಕಳದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ರ ಮಾರ್ಪಾಡಿ ಪುತ್ತಿಗೆ ವ್ಯಾಪ್ತಿಯಲ್ಲಿ ಖಾಸಗಿಯವರು ಅತಿಕ್ರಮಿಸಿರುವ ಸರಕಾರಿ ಭೂಮಿಯನ್ನು ಉಳಿಸಲು ಮತ್ತು ಭೂ ಮಾಫಿಯಾಕ್ಕೆ ಅನುಕೂಲ ಮಾಡಿ ಕೊಡಲು ಜನಪ್ರತಿನಿಧಿಗಳು ಹಾಗೂ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ಬ್ರಹತ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಎಸ್.ಡಿ.ಪಿ.ಐ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಗಂಭೀರ ಆರೋಪ ಮಾಡಿದ್ದಾರೆ.

- Advertisement -

2018ರಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸರ್ವೆ ಮಾಡಿ ಅಂತಿಮ ನೋಟಿಫಿಕೇಶನ್ ಸಲ್ಲಿಸಲಾಗಿತ್ತು. ಅದರಂತೆ ಸಣ್ಣ ಕೈಗಾರಿಕಾ ಪ್ರದೇಶವನ್ನು ಮುಟ್ಟದೇ ಅದನ್ನು ಸಂರಕ್ಷಿಸಿ ಕೈಗಾರಿಕಾ ಪ್ರದೇಶದ ಮುಂದಿರುವ ಸರಕಾರಿ ಜಮೀನುಗಳನ್ನು ಅಧಿಸೂಚಿಸಲಾಗಿತ್ತು. ಆ ಪ್ರಕಾರವೇ 3ಡಿ ನಕ್ಷೆಯು ತಯಾರಾಗಿತ್ತು. ಅದರಂತೆಯೇ 2021 ಮೇ 5 ರಂದು ಮಾರ್ಪಾಡಿ ಗ್ರಾಮಕ್ಕೆ ಎವಾರ್ಡ್ ಆಗಿ ಪರಿಹಾರ ಮೊತ್ತವನ್ನು ಪಡೆಯಲು ನೋಟಿಸ್ ಮೂಲಕ ಸೂಚಿಸಲಾಗಿತ್ತು. ಆದರೆ ಅದನ್ನು ರಾಜಕೀಯ ಪ್ರಭಾವಿ ವ್ಯಕ್ತಿಗಳ ಲಾಭಿಗೆ ಮಣಿದು ಮಾರ್ಪಾಡಿಯ ನಕ್ಷೆಯನ್ನು ಬದಲಾಯಿಸಿ 08 ಜೂನ್ 2022 ರಂದು ಹೊಸದಾಗಿ ಪುನಃ 3E ಅಧಿಸೂಚನೆಯನ್ನು ಪತ್ರಿಕೆಯಲ್ಲಿ ನೀಡಿದ್ದು ಆ ಪ್ರಕಾರ 2022 ಆಗಸ್ಟ್ 30 ರಂದು 3ಡಿ ಯನ್ನು ಪತ್ರಿಕೆಯಲ್ಲಿ ನೀಡಿದ್ದಾರೆ. ಹಳೆಯ ಅಧಿಸೂಚನೆಯಲ್ಲಿರುವ ಜಮೀನನ್ನು ಸಂಪೂರ್ಣವಾಗಿ ಬಿಟ್ಟಿರುವುದೆ ಭೂಮಾಫಿಯ ಆಗಿರುವುದು ಸ್ಪಷ್ಟವಾಗಿ ಮಾರ್ಪಾಡಿ ಗ್ರಾಮದಲ್ಲಿ ಕಂಡುಬಂದಿದೆ ಎಂದು ಅವರು ಆರೋಪಿಸಿದರು.

 ರಾಜಕೀಯ ಷಡ್ಯಂತ್ರ ಹಾಗೂ ಕೆಲವು ಪ್ರಭಾವಿಗಳ ನಿವೇಶನ ಹಾಗೂ ಜಮೀನುಗಳನ್ನು ರಕ್ಷಿಸುವ ದುರುದ್ದೇಶದಿಂದ ಅವರ ಒತ್ತಡಕ್ಕೆ ಮಣಿದು ಆ ಜಮೀನುಗಳ ಮುಂದೆ ಸಾಕಷ್ಟು ಸರಕಾರಿ ಜಮೀನು ಇದ್ದರೂ ಆ ಜಮೀನುಗಳ ಮುಂದಿರುವ ಜಮೀನುಗಳನ್ನು ವಶಪಡಿಸಲು ಹುನ್ನಾರ ನಡೆಸಿರುವುದು, ಅಲೈನ್ಮೆಂಟ್ ಬದಲಿಸಿರುವುದು ನಮ್ಮ ಸಮೀಕ್ಷೆಯಲ್ಲಿ ಮಾರ್ಪಾಡಿಯಲ್ಲಿ ಕಂಡು ಬಂದಿದೆ. ಈ ಹೊಸ ಅಲೈನ್ಮೆಂಟ್ ನಿಂದ ಮಾರ್ಪಾಡಿ ಗ್ರಾಮದ ಕೈಗಾರಿಕಾ ವಲಯದ ಹಲವು ಕೈಗಾರಿಕೆಗಳಿಗೆ ಹಾನಿಯಾಗುವುದು ಖಚಿತ ಎಂದು ಅವರು ಆರೋಪಿಸಿದ್ದಾರೆ.

- Advertisement -

 ಈ ಎಲ್ಲಾ ಅಕ್ರಮಗಳಿಗೆ ದಕ್ಷಿಣ ಕನ್ನಡ ಜಿಲ್ಲೆ ಸಂಸದರೇ ಹೊಣೆಗಾರರಾಗಿರುತ್ತಾರೆ. ಕೈಗಾರಿಕಾ ವಲಯ ಸಂಪೂರ್ಣ ರಕ್ಷಣೆ ಆಗಬೇಕು, ಸರಕಾರಿ ಜಮೀನುಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಸರಕಾರಿ ಬೊಕ್ಕಸಕ್ಕೆ ನಷ್ಟ ಆಗದ ರೀತಿಯಲ್ಲಿ  2018 ರ ಅಧಿಸೂಚನೆಯ ಪ್ರಕಾರವೇ ಮುಂದುವರಿಯಬೇಕು. ದೇವಸ್ಥಾನ ಮುಂತಾದ ಧಾರ್ಮಿಕ ಸೊತ್ತುಗಳನ್ನು ಉಳಿಸಿಕೊಂಡು ಐತಿಹಾಸಿಕ  ಜೈನ ಕಾಶಿಯ ಸೌಂದರ್ಯವನ್ನು ಉಳಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯ  ಕಾಮಗಾರಿ ಅತೀ ಶೀಘ್ರವಾಗಿ ಮುಗಿಸಬೇಕು. ಅದೇ ರೀತಿ ಈ ಅಕ್ರಮದಲ್ಲಿ ಯಾರೆಲ್ಲ ಶಾಮಿಲಾಗಿದ್ದಾರೋ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಎಸ್.ಡಿ.ಪಿ.ಐ ಯು ಮುಂದಿನ ದಿನಗಳಲ್ಲಿ ನಾಗರಿಕರನ್ನು ಸೇರಿಸಿಕೊಂಡು ಬ್ರಹತ್ ಪ್ರತಿಭಟನೆ ಹಾಗೂ ಕಾನೂನು ಸಮರದ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಿ ಕೊಡಲು ಬದ್ಧವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೊ, ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ನಿಸಾರ್ ಮರವೂರು, ಸಮಿತಿ ಸದಸ್ಯರಾದ ಮುಬೀನ್ ಕೊಳ್ನಾಡ್, ಸಲಾಂ ಸೂರಿಂಜೆ, ಇಮ್ರಾನ್ ಮತ್ತಿತರರು ಉಪಸ್ಥಿತರಿದ್ದರು.



Join Whatsapp