ಪಾಕಿಸ್ತಾನ: ಆಸ್ಪತ್ರೆ ಮೇಲ್ಛಾವಣಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆ

Prasthutha|

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಸಾರ್ವಜನಿಕ ಆಸ್ಪತ್ರೆಯೊಂದರ ಮೇಲ್ಛಾವಣಿಯಲ್ಲಿ ಹಲವು ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಪ್ರಕರಣವನ್ನು ಅಲ್ಲಿನ ಮುಖ್ಯಮಂತ್ರಿ ಫರ್ವೇಜ್‌ ಇಲಾಹಿ ಗಂಭೀರವಾಗಿ ಪರಿಗಣಿಸಿದ್ದಾರೆ.

- Advertisement -


ಪ್ರಕರಣದ ಸಂಪೂರ್ಣ ತನಿಖೆಗೆ ಆರೋಗ್ಯ ಕಾರ್ಯದರ್ಶಿ ಮುಝಮ್ಮಿಲ್‌ ಬಶೀರ್‌ ನೇತೃತ್ವದಲ್ಲಿ ಆರು ಸದಸ್ಯರ ವಿಶೇಷ ಅಧಿಕಾರವುಳ್ಳ ಸಮಿತಿಯನ್ನು ರಚಿಸಲಾಗಿದ್ದು, ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ.


ಲಾಹೋರ್‌ನಿಂದ ಸುಮಾರು 350 ಕಿ.ಮೀ ದೂರದ ಮುಲ್ತಾನ್‌ನಲ್ಲಿರುವ ನಿಶ್ತೆರ್ ಆಸ್ಪತ್ರೆಗೆ ಮುಖ್ಯಮಂತ್ರಿಯ ಸಲಹೆಗಾರ ಚೌಧರಿ ಜಮಾನ್ ಗುಜ್ಜರ್ ಅವರು ಭೇಟಿ ನೀಡಿ ಆಸ್ಪತ್ರೆಯ ಶವಾಗಾರದ ಮೇಲ್ಛಾವಣಿಯ ಮೇಲಿದ್ದ ಹಲವು ಶವಗಳನ್ನು ವೀಕ್ಷಿಸಿದ್ದಾರೆ.

- Advertisement -


ಮುಖ್ಯಮಂತ್ರಿ ಅವರು ಶವಗಳ ಅಂತ್ಯ ಸಂಸ್ಕಾರಕ್ಕೆ ಆದೇಶಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


‘ಅಪರಿಚಿತ ಹಾಗೂ ವಾರಸುದಾರರಿಲ್ಲದ ಶವಗಳನ್ನು ಪೊಲೀಸ್‌ ಇಲಾಖೆಯಿಂದ ಪಡೆದುಕೊಳ್ಳಲಾಗಿದೆ. ಶವಗಳು ಕೊಳೆಯಲಾರಂಭಿಸಿದ್ದರಿಂದ ವೈದ್ಯಕೀಯ ಉದ್ದೇಶಗಳಿಗಾಗಿ ಅವುಗಳನ್ನು ಮೇಲ್ಛಾವಣಿಯಲ್ಲಿ ಇರಿಸಲಾಗಿತ್ತು. ಈ ದೇಹಗಳನ್ನು ವಿದ್ಯಾರ್ಥಿಗಳು ವೈದ್ಯಕೀಯ ಪ್ರಯೋಗಗಳಿಗಾಗಿ ಬಳಸುತ್ತಿದ್ದು, ಸರ್ಕಾರದ ನಿಯಮಾವಳಿಗಳ ಅನುಸಾರವಾಗಿಯೇ ಎಲ್ಲವನ್ನೂ ಮಾಡಲಾಗುತ್ತದೆ ಎಂದು ನಿಶ್ತೆರ್ ವೈದ್ಯಕೀಯ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ.ಮರಿಯಮ್‌ ಅಶ್ರಫ್‌ ತಿಳಿಸಿದರು.


ಶವಗಳನ್ನು ರಣಹದ್ದುಗಳಿಗೆ ಆಹಾರವಾಗಿ ಇಡಲಾಗಿದೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದು, ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ನಾಪತ್ತೆಯಾಗಿರುವ ತಮ್ಮವರ ಶವಗಳು ಆಸ್ಪತ್ರೆಯಲ್ಲಿ ಪತ್ತೆಯಾಗಿವೆ ಎಂದು ಬಲೂಚಿಸ್ತಾನ ಪ್ರತ್ಯೇಕವಾದಿಗಳು ಹೇಳುತ್ತಿದ್ದಾರೆ.



Join Whatsapp