ಏಕದಿನ ವಿಶ್ವಕಪ್ 2023| ₹955 ಕೋಟಿ ತೆರಿಗೆ ವಿನಾಯಿತಿಗೆ ಬಿಸಿಸಿಐ ಮನವಿ

Prasthutha|

ಮುಂಬೈ: 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿ ಭಾರತದಲ್ಲಿ ನಡೆಯಲಿದ್ದು,  ಅಕ್ಟೋಬರ್ ತಿಂಗಳಲ್ಲಿ ಪ್ರತಿಷ್ಠಿತ ಟೂರ್ನಿ ಆರಂಭವಾಗಲಿದೆ. ವಿಶ್ವಕಪ್‌ ಆಯೋಜಿಸುವ ಹುಮ್ಮಸ್ಸಿನಲ್ಲಿರುವ ಬಿಸಿಸಿಐ, ತನ್ನ ಆದಾಯದ ಪಾಲಿನ ಬಹುದೊಡ್ಡ ಸಂಖ್ಯೆಯೊಂದನ್ನು ತೆರಿಗೆ ರೂಪದಲ್ಲಿ ಪಾವತಿಸಲೇಬೇಕಾದ ಇಕ್ಕಟ್ಟಿಗೆ ಸಿಲುಕಿದೆ.  ನಿಯಮಗಳ ಪ್ರಕಾರ, ಐಸಿಸಿ ನೀಡುವ ಆದಾಯದ ಪಾಲಿನಿಂದ ವಿಶ್ವಕಪ್‌ ಟೂರ್ನಿಯ ತೆರಿಗೆ ವೆಚ್ಚವನ್ನು ಬಿಸಿಸಿಐ ಹೊಂದಿಸಬೇಕಾಗಿದೆ.

- Advertisement -

ಐಸಿಸಿಯ ಪ್ರಸಾರ ಆದಾಯದ ಮೇಲೆ ಶೇಕಡಾ 21.84 ತೆರಿಗೆ (ಹೆಚ್ಚುವರಿ ಶುಲ್ಕ) ವಿಧಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅಂಟಿಕೊಂಡರೆ, ಬಿಸಿಸಿಐ ಸುಮಾರು ₹955 ಕೋಟಿ (116 ಮಿಲಿಯನ್ ಡಾಲರ್) ಕಳೆದುಕೊಳ್ಳಬಹುದು ಎಂದು ಬಿಸಿಸಿಐ ವರದಿ ತಿಳಿಸಿದೆ. ಐಸಿಸಿ ನಿಯಮಾವಳಿಗಳ ಪ್ರಕಾರ, ವಿಶ್ವಕಪ್ ಆತಿಥ್ಯ ವಹಿಸುವ ದೇಶವು ಅಲ್ಲಿನ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯಬೇಕು.

ಆದರೆ, ಭಾರತದ ತೆರಿಗೆ ನಿಯಮಗಳಲ್ಲಿ ಅಂತಹ ವಿನಾಯಿತಿಗಳಿಗೆ ಅವಕಾಶ ಇಲ್ಲ.  ಈ ಹಿಂದೆ 2016ರ ಟಿ20ವಿಶ್ವಕಪ್ ಆಯೋಜಿಸಿದ್ದ ವೇಳೆ ಬಿಸಿಸಿಐ ₹193 ಕೋಟಿ ತೆರಿಗೆ ವಿನಾಯತಿಗೆ ಮನವಿ ಮಾಡಿತ್ತಾದರೂ, ಸರ್ಕಾರ ಒಪ್ಪಿರಲಿಲ್ಲ. ಈ ಸಂಬಂಧ ಬಿಸಿಸಿಐ ಈಗಲೂ ಐಸಿಸಿ ಟ್ರಿಬ್ಯೂನಲ್‌ನಲ್ಲಿ ಹೋರಾಡುತ್ತಿದೆ.

- Advertisement -

‘2023ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಪ್ರಸಾರ ಆದಾಯದ ಮೇಲೆ ಶೇಕಡ 20 ತೆರಿಗೆ(ಹೆಚ್ಚುವರಿ ಶುಲ್ಕ ಹೊರತುಪಡಿಸಿ) ಕುರಿತಾದ ಭಾರತದ ತೆರಿಗೆ ಅಧಿಕಾರಿಗಳ ಆದೇಶ ಈಗಾಗಲೇ ಐಸಿಸಿಗೆ ತಲುಪಿದೆ. ಇದರಿಂದಾಗಿ ಐಸಿಸಿಯಿಂದ ಬಿಸಿಸಿಐಗೆ ಬರಲಿರುವ ಆದಾಯದಲ್ಲಿ ಕಡಿತವಾಗಲಿದೆ ಎಂದು ರಾಜ್ಯ ಘಟಕಗಳಿಗೆ ಕಳುಹಿಸಿರುವ ಪತ್ರದಲ್ಲಿ ಬಿಸಿಸಿಐ ಮಾಹಿತಿ ನೀಡಿದೆ.

ಅದಾಗಿಯೂ, ತೆರಿಗೆ ವಿನಾಯತಿ ಪಡೆಯುವ ತನ್ನ ಪ್ರಯತ್ನವನ್ನು ಬಿಸಿಸಿಐ ಮುಂದುವರಿಸಿದೆ.  ಶೇಕಡಾ 21.84 ತೆರಿಗೆ ಹೆಚ್ಚುವರಿ ಶುಲ್ಕವನ್ನು ಶೇಕಡಾ 10.92ಕ್ಕೆ  ಇಳಿಸಲು ಬಿಸಿಸಿಐ ಪ್ರಯತ್ನಿಸುತ್ತಿದೆ. ಹೀಗಾದಲ್ಲಿ ಆದಾಯ ನಷ್ಟವು ₹955 ಕೋಟಿ ಬದಲು ಸುಮಾರು 430 ಕೋಟಿ ಆಗಲಿದೆ.

2016 ರಿಂದ 2023 ರ ಅವಧಿಯಲ್ಲಿ ಐಸಿಸಿಯ ಕೇಂದ್ರ ಆದಾಯದ  ಪಾಲಿನ ಮೂಲಕ ಅಂದಾಜು 3336 ಕೋಟಿ ರೂಪಾಯಿಯನ್ನು ಬಿಸಿಸಿಐ, ಪಡೆದುಕೊಂಡಿದೆ.



Join Whatsapp