ನಿರುದ್ಯೋಗ, ಬೆಲೆ ಏರಿಕೆ ಖಂಡಿಸಿ ಅ.15 ರಿಂದ ವೆಲ್ಫೇರ್ ಪಾರ್ಟಿಯಿಂದ ಜನಜಾಗೃತಿ ಜಾಥ

Prasthutha|

ಬೆಂಗಳೂರು: ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಯ ವಿರುದ್ಧ ಅಕ್ಟೋಬರ್ 15 ರಿಂದ 31ರವರೆಗೆ “ದೇಶದೆಲ್ಲೆಡೆ ಹಾಹಾಕಾರ-ನಿರುದ್ಯೋಗ ಬೆಲೆ ಏರಿಕೆಗೆ ಎಂದು ಪರಿಹಾರ” ಎಂಬ ಘೋಷವಾಕ್ಯದೊಂದಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ  ಜನಾಂದೋಲನ ಹಮ್ಮಿಕೊಂಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ತಿಳಿಸಿದ್ದಾರೆ.

- Advertisement -

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆ ಆಂದೋಲನದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಹೃದಯವಾದ ಕಲಬುರಗಿಯಿಂದ ಮಂಗಳೂರಿನವರೆಗೆ ಜನ ಜಾಗೃತಿ ಜಾಥಾ ನಡೆಯಲಿದೆ ಎಂದು ಹೇಳಿದರು.

ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಬಿಕ್ಕಟ್ಟು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು, ಕೂಡಲೇ ಪರಿಹಾರ ಕ್ರಮ ತೆಗೆದುಕೊಳ್ಳಬೇಕು. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ಬಡವರಿಗೆ ಅವರ ಖರೀದಿ ಸಾಮರ್ಥ್ಯವನ್ನು ಸಕ್ರಿಯಗೊಳಿಸಲು ಹಣ ನೀಡಬೇಕು. ಎಲ್ಲಾ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಉಚಿತ ಸಿಲಿಂಡರ್ ಮತ್ತು ಸಬ್ಸಿಡಿ ರಿಫಿಲ್ ಸಿಲಿಂಡರ್ ಗಳು ನೀಡಬೇಕು. ಅಪೌಷ್ಟಿಕತೆ ಮತ್ತು ಹಸಿವು ತಡೆಯಲು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಅನ್ನ ರೋಜ್ ಗಾರ್ ಯೋಜನೆ ಮುಂದುವರೆಸಬೇಕು. ಅಸಂಘಟಿತ ವಲಯಗಳನ್ನು ಸಂಘಟಿಸಬೇಕು ಮತ್ತು ಭದ್ರತೆಗಳನ್ನು ನೀಡಬೇಕು. ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ಮತ್ತು ಭದ್ರತೆ ನೀಡಬೇಕು. ಕಾಳ ಸಂತೆ ಮತ್ತು ಭ್ರಷ್ಟಾಚಾರವನ್ನು ತಡೆಯಲು ಸೂಕ್ತ ಕಾನೂನು ಜಾರಿಗೊಳಿಸಬೇಕು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಈ ಆಂದೋಲನ ದ ಸಂದರ್ಭದಲ್ಲಿ ಆಗ್ರಹಿಸಿಲಾಗುವುದು ಎಂದು ಅವರು ತಿಳಿಸಿದರು.

- Advertisement -

ಜಾಥಾ ಸಂದರ್ಭದಲ್ಲಿ ಸಾರ್ವಜನಿಕ ಸಭೆ, ಬೈಕ್ ಜಾಥಾ, ಪತ್ರಿಕಾಗೋಷ್ಠಿ, ಬೀದಿ ನಾಟಕಗಳ ಮೂಲಕ ಜನ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತದೆ ಎಂದು ತಾಹೇರ್ ಹುಸೇನ್  ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ರಾಜ್ಯ ಖಜಾಂಚಿ ರಿಯಾಝ್ ಪಾಷಾ ಉಪಸ್ಥಿತರಿದ್ದರು.



Join Whatsapp