ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅ.14 ರಿಂದ 16 ರ ವರೆಗೆ ಒಡಿಶಾ ರಾಜ್ಯದ ವಿಭಿನ್ನ ಹಾಗೂ ಅಪರೂಪದ ಕಲೆ, ಸಂಗೀತ, ನಾಟಕ, ಸಾಹಿತ್ಯ ಪ್ರಕಾರಗಳನ್ನೊಳಗೊಂಡ ವೈಭವದ “ಒಡಿಶಾ ಉತ್ಸವ” ಆಯೋಜಿಸಲಾಗಿದೆ.
ಒಡಿಶಾ ಸರ್ಕಾರದ ವಿವಿಧ ನಿಗಮಗಳು, ಉಭಯ ರಾಜ್ಯಗಳ ರಂಗ ಕರ್ಮಿಗಳು, ಸಾಹಿತ್ಯ ದಿಗ್ಗಜರು ಉತ್ಸವದಲ್ಲಿ ಭಾಗಿಯಾಗಲಿದ್ದು, ಒಡಿಶಾ ಉತ್ಸವಕ್ಕೆ ಮೆರಗು ನೀಡಲಿದ್ದಾರೆ. ಒಡಿಶಾದ ಬಹುತೇಕ ಕಲಾ ಪ್ರದರ್ಶನಗಳಿಗೆ ಮೂರು ದಿನಗಳ ಕಾಲ ವೇದಿಕೆ ಕಲ್ಲಿಸಿದ್ದು, ರಾಜ್ಯದ ಯಕ್ಷಗಾನ, ಜಾನಪದ ಮತ್ತಿತರ ಕಲಾ ತಂಡಗಳು ಶೀಘ್ರದಲ್ಲೇ ಒಡಿಶಾದಲ್ಲಿ ಪ್ರದರ್ಶನ ನೀಡಲಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಡಿಶಾ ಸರ್ಕಾರದ ಒಡಿಯಾ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಮತ್ತು ಹೆಚ್ಚುವರಿ ಕಾರ್ಯದರ್ಶಿ ರಂಜನ್ ಕುಮಾರ್ ದಾಸ್, ಶುಕ್ರವಾರ ಸಂಜೆ [ಅ.14] 6.30 ಕ್ಕೆ ಒಡಿಶಾ ಉತ್ಸವವನ್ನು ಒಡಿಶಾ ಪ್ರವಾಸೋದ್ಯಮ, ಒಡಿಶಾ ಭಾಷೆ, ಸಾಹಿತ್ಯ – ಸಂಸ್ಕೃತಿ ಸಚಿವ ಅಶ್ವಿನಿ ಕುಮಾರ್ ಪಾತ್ರ ಉದ್ಘಾಟಿಸಲಿದ್ದು, ಹೆಚ್ಚುವರಿ ಕಾರ್ಯದರ್ಶಿ ಮಧು ಸುದಾನ್ ಪಧಿ, ರಂಗಕರ್ಮಿ ಅರುಂಧತಿ ನಾಗ್, ಹಿರಿಯ ಸಾಹಿತಿ ಸುಧಾಮೂರ್ತಿ, ಒಡಿಶಾ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಅರುಣಾ ಮೊಹಂತಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ವಿಶ್ವ ವಿಖ್ಯಾತ ಪುರಿ ಜಗನ್ನಾಥ್, ಭಗವಾನ್ ವಿಷ್ಣು ಆಧಾರಿತ ಆಯ ನೀಳ ಸಯಿಳೋ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದ್ದು, ಇದು ಒಡಿಶಾದಲ್ಲಿ ಅತ್ಯಂತ ಜನಪ್ರಿಯ ಮತ್ತು ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ನಾಟಕವಾಗಿದೆ. ಸಾಹಿತ್ಯಗೋಷ್ಠಿಗಳಲ್ಲಿ ಚಂದ್ರಶೇಖರ ಕಂಬಾರ, ಎಚ್.ಎಚ್. ಶಿವಪ್ರಕಾರ್, ಒಡಿಶಾದ ಖ್ಯಾತ ಸಾಹಿತಿಗಳು ಭಾಗವಹಿಸಲಿದ್ದಾರೆ. ಈ ಮೂಲಕ ಒಡಿಶಾದ ಭವ್ಯ ಮತ್ತು ಶ್ರೇಷ್ಠ ಸಾಂಸ್ಕೃತಿಕ ವಲಯದ ವಿಶೇಷತೆಗಳನ್ನು ಹೂಡಿಕೆ ಮಾಡಲು ಕರ್ನಾಟಕಕ್ಕೆ ಬಂದಿದ್ದೇವೆ ಎಂದರು.
ಇದಲ್ಲದೇ ಒಡಿಶಾದ ಖ್ಯಾತ ಪಟಚಿತ್ರ ಕಲಾ ಪ್ರಕಾರವನ್ನು ಅಲ್ಲಿನ ರಘುರಾಜ್ ಪುರ್ ಹಳ್ಳಿಯ ಕಲಾವಿದರು ಪ್ರದರ್ಶಿಸಲಿದ್ದಾರೆ. ಒಣಗಿದ ಎಲೆಯಲ್ಲಿ ರಾಮಾಯಣ, ಮಹಾಭಾರತ ಮತ್ತಿತರ ವಿಷಯಗಳ ಬಗ್ಗೆ ಕಲಾ ರಚನೆಗಳನ್ನು ಇವರು ಮಾಡಲಿದ್ದಾರೆ. ಗೋಡಾ ನಾಚ್, ಸಂಬಲ್ ಪುರಿ ನೃತ್ಯ, ಚಾವ್ ಡಾನ್ಸ್ ಒಳಗೊಂಡಂತೆ ತುಂಬಾ ಅಪರೂಪದ ನೃತ್ಯ ಪ್ರದರ್ಶನ ಜೊತೆಗೆ ವೈವಿಧ್ಯಮಯ ಜಾನಪದ ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಒಟ್ಟಾರೆ ಕಲೆ, ಸಂಸ್ಕೃತಿ, ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿದ್ದೇವೆ ಎಂದು ಅಶ್ವಿನಿ ಕುಮಾರ್ ಪಾತ್ರ ಹೇಳಿದರು.
ಒಡಿಯಾ ಭಾಷಾ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಸುಬೋಧ ಚಂದ್ರ ಆಚಾರ್ಯ ಮಾತನಾಡಿ, ನೃತ್ಯ ಪಟು ಅನುಪಮಾ ರಾಜೇಂದ್ರ, ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ಮತ್ತಿತರಿಂದ ವೈಭವದ ಸಂಗೀತ, ನೃತ್ಯ ಪ್ರಕಾರಗಳಿಗೆ ಜೀವ ತುಂಬುವ ಕೆಲಸ ಮಾಡಲಿದ್ದೇವೆ. ಒಡಿಶಾದ ಸಂಗೀತ ನಾಟಕ, ಲಲಿತಾ ಕಲಾ ಅಕಾಡೆಮಿ, ಸಾಹಿತ್ಯ ಅಕಾಡೆಮಿಗಳು ಉತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಮೂರು ದಿನಗಳ ಕಾಲ ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಪದ್ಮಶ್ರೀ ಉತ್ಸವ್ ಚ ಘೋಡಾ ನಾಚ್ ಅವರೊಂದಿಗೆ. ದಾಸ್ & ಗ್ರೂಪ್, ಲೋಕನಾಥ್ ಅವರಿಂದ ಚೌ ನೃತ್ಯ, ದಾಸ್ & ಗ್ರೂಪ್, ದಿಲೀಪ್ ಕುಮಾರ್ ಸಾಹೂ ಮತ್ತು ಗ್ರೂಪ್ ಅವರಿಂದ ಸಂಬಲ್ಪುರಿ ನೃತ್ಯ ಮತ್ತು ಸಿಂಘಾರಿ ನೃತ್ಯಗಳು ಉತ್ಸವದಲ್ಲಿ ವಿಶೇಷ ಮೆರಗು ತರಲಿವೆ ಎಂದು ಹೇಳಿದರು.