ಮಂಗಳೂರು: ಲೈಂಗಿಕವಾಗಿ ಬಳಸಿಕೊಂಡು ಒಪ್ಪಿಕೊಂಡಂತೆ 300 ರೂ. ನೀಡಲು ನಿರಾಕರಿಸಿದ್ದ ವೃದ್ಧನನ್ನು ಕತ್ತು ಹಿಸುಕಿ ಕೊಂದಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದ್ದು, ಪ್ರಕರಣದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿದ್ದಾರೆ.
ನಗರದ ಮಂದಾರಬೈಲು ಜಯಾನಂದ ಆಚಾರ್ಯ(65) ಕೊಲೆಯಾದ ವೃದ್ಧ. ಕೃತ್ಯ ನಡೆಸಿದ ಕುಂಜತ್ ಬೈಲ್ ಪ್ರದೇಶದ ದೇವಿನಗರದ ರಾಜೇಶ್ ಪೂಜಾರಿ(31)ಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಕಾವೂರು ಹರಿಪದವು ಎಂಬಲ್ಲಿನ ಕಿಯೋನಿಕ್ಸ್ ಗೆ ಸೇರಿದ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಕೊಲೆಯಾದ ಜಯಾನಂದ ಆಚಾರ್ಯ ಕೂಲಿ ಕೆಲಸ ಮಾಡುತ್ತಿದ್ದು, ದಸರಾ ಸಂದರ್ಭದಲ್ಲಿ ಹೆಣ್ಣು ವೇಷ ಹಾಕುತ್ತಿದ್ದರು. ವಿಪರೀತ ಮದ್ಯದ ಚಟದ ದಾಸರಾಗಿದ್ದ ಇವರು ಯುವಕನೊಬ್ಬನನ್ನು ಲೈಂಗಿಕವಾಗಿ ಬಳಸಿಕೊಂಡು ಕೊಲೆಗೀಡಾಗಿದ್ದಾರೆ.
ಬಂಧಿತ ಆರೋಪಿ ರಾಜೇಶ್ ಪೂಜಾರಿ ನಗರದ ಲಾಲ್ ಬಾಗ್ ನಲ್ಲಿರುವ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ. ಈತನನ್ನು ವೃದ್ಧ ಜಯಾನಂದ ಆಚಾರ್ಯ ಸಲಿಂಗಕಾಮದ ಉದ್ದೇಶಕ್ಕೆಂದು ಕಳೆದ ಅ. 7, 8 ರಂದು ಬಳಸಿಕೊಂಡಿದ್ದ. ಬಳಿಕ ಹಣ ನೀಡುವುದಾಗಿ ಭರವಸೆ ನೀಡಿದ್ದ. ಆದರೆ, ಸಲಿಂಗಕಾಮದ ಬಳಿಕ 300 ರೂ. ಕೊಡಲು ಜಯಾನಂದ ಆಚಾರ್ಯ ಸತಾಯಿಸಿದ್ದರಿಂದ ಕೋಪಗೊಂಡ ಯುವಕ ರಾಜೇಶ್ ಪೂಜಾರಿ ಹಗ್ಗದಿಂದ ಜಯಾನಂದ ಆಚಾರ್ಯ ಅವರ ಕತ್ತು ಬಿಗಿದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾವೂರು ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.