ತಿರುವನಂತಪುರಂ: ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ ಇಬ್ಬರು ಅನಿವಾಸಿ ಭಾರತೀಯರ ಮೃತದೇಹಗಳು ಅದಲು ಬದಲಾದ ಪರಿಣಾಮ ಉತ್ತರ ಪ್ರದೇಶದ ಮುಸ್ಲಿಂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಅಲಪ್ಪುಝ ಜಿಲ್ಲೆಯ 46 ವರ್ಷದ ಶಾಜಿ ರಾಜನ್ ಮತ್ತು ಉತ್ತರ ಪ್ರದೇಶದ ವಾರಣಾಸಿ ಮೂಲದ ಜಾವೇದ್ ಅಹ್ಮದ್ ಇದ್ರಿಶಿ (45) ಸೌದಿಯಲ್ಲಿ ಮೃತಟ್ಟಿದ್ದರು. ರಾಜನ್ ಎರಡೂವರೆ ತಿಂಗಳ ಹಿಂದೆ ಅಲ್ ಅಹ್ಸಾ ಪಟ್ಟಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇದ್ರಿಶಿ ಸೆಪ್ಟೆಂಬರ್ 25 ರಂದು ದಮಾಮ್ ನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ರಾಜನ್ ಅವರ ಮೃತದೇಹವನ್ನು ದಮ್ಮಾಮ್ ನಿಂದ ಕೊಲಂಬೊ ಮೂಲಕ ಕೇರಳದ ತಿರುವನಂತಪುರಕ್ಕೆ ಏರ್ ಲಂಕಾ ಮೂಲಕ ಕುಟುಂಬಕ್ಕೆ ಹಸ್ತಾಂತರಿಸಬೇಕಾಗಿತ್ತು. ಮತ್ತು ಜಾವೇದ್ ಅವರ ದೇಹವನ್ನು ಇಂಡಿಗೋ ಕ್ಯಾರಿಯರ್ ಮೂಲಕ ದಮಾಮ್ ನಿಂದ ನವದೆಹಲಿ ಮೂಲಕ ವಾರಣಾಸಿಗೆ ವಾಪಸ್ ಕಳುಹಿಸಬೇಕಾಗಿತ್ತು. ಆದರೆ ಮೃತದೇಹ ರವಾನೆ ವೇಳೆ ನಡೆದ ಅಚಾತುರ್ಯದಿಂದ ಇದ್ರಿಶ್ ಮೃತದೇಹ ಹಿಂದೂ ಸಂಪ್ರದಾಯದಂತೆ ಕೇರಳದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.