ವ್ಯಕ್ತಿಯನ್ನು ಕೊಂದು ಅಪಘಾತವೆಂದು ಬಿಂಬಿಸಿದ್ದ ನಾಲ್ವರು ಸೆರೆ

Prasthutha|

ಹಾಸನ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಬಳಿಕ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

- Advertisement -

ಬೆಳಗಾವಿ ಮೂಲದ ಆನಂದ್ ಅಲಿಯಾಸ್ ಉಮೇಶ್ ಕೊಲೆಯಾದವರು. ಕೃತ್ಯ ನಡೆಸಿದ ಆಂಧ್ರಪ್ರದೇಶ ಮೂಲದ ರಘು (32), ಗದಗದ ಶಶಿ (28), ಬೆಂಗಳೂರಿನ ಹೊಸಕೋಟೆಯ ರವಿಕುಮಾರ್ (33) ಹಾಗೂ ಬಾಗಲಕೋಟೆ ಜಿಲ್ಲೆಯ ರಾಜ (32)ನನ್ನು ಬಂಧಿಸಲಾಗಿದೆ.

ಜಿಲ್ಲೆಯ ಶಾಂತಿಗ್ರಾಮ ಸಮೀಪದ ಬಣಗಟ್ಟೆ ರೈಲ್ವೆ ಸೇತುವೆ ಬಳಿ ಬುಲೆರೋ ವಾಹನದಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರೈಲ್ವೆ ಹಳಿ ಮೇಲಿಂದ ಬಿದ್ದು ವಾಹನ ಅಪಘಾತಕೀಡಾಗಿತ್ತು. ಈ ಕುರಿತು ಸ್ಥಳೀಯರು ಶಾಂತಿಗ್ರಾಮ ಪೊಲೀಸರಿಗೆ ವಿಷಯ ತಿಳಿಸಿದ್ದರು.

- Advertisement -

ಸ್ಥಳಕ್ಕೆ ಬಂದ ಪೊಲೀಸರು 40 ಅಡಿ ಎತ್ತರದಿಂದ ಬಿದ್ದ ವಾಹನದಲ್ಲಿದ್ದವರನ್ನು ರಕ್ಷಣೆ ಮಾಡಲು ಮುಂದಾದಾಗ, ಅದರಲ್ಲಿದ್ದ ಓರ್ವ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಓಡುತ್ತಿದ್ದ ಆರೋಪಿ ರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದು ಅಪಘಾತವಲ್ಲ, ಕೊಲೆ ಪ್ರಕರಣ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಆರೋಪಿಗಳು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾದ ಬಳಿಕ ಹೆಚ್ಚಿನ ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ



Join Whatsapp