ಬೆಂಗಳೂರು: ಅಧಿಕ ಬಡ್ಡಿಯ ಆಮಿಷವೊಡ್ಡಿ ಗ್ರಾಹಕರಿಗೆ ವಂಚಿಸಿರುವ ವಿಲ್ಸನ್ ಗಾರ್ಡನ್ ನ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಹಲವು ಪ್ರಕರಣಗಳು ದಾಖಲಾದ ಬೆನ್ನಲ್ಲೇ ಇಂದು ಮುಂಜಾನೆಯಿಂದ ಸಿಸಿಬಿ ಪೊಲೀಸರು ಬ್ಯಾಂಕ್ ನ ನಿರ್ದೇಶಕ, ಕೇಂದ್ರ ಕಚೇರಿ ಹಾಗೂ ವಿವಿಧ ಬ್ರಾಂಚ್ ಗಳು ಮೇಲೆ ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ.
ವಿಲ್ಸನ್ ಗಾರ್ಡನ್, ಪೀಣ್ಯ, ರಾಜಗೋಪಾಲನಗರ, ಚಿಕ್ಕಚಾಲ ಸೇರಿದಂತೆ ನಗರದ ಹದಿನಾಲ್ಕು ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಐವರು ಎಸಿಪಿ, ಹದಿನಾಲ್ಕು ಇನ್ಸ್ ಪೆಕ್ಟರ್ ಸೇರಿ ಅರವತ್ತಕ್ಕೂ ಹೆಚ್ಚು ಪೊಲೀಸರ ತಂಡವು ದಾಳಿ ನಡೆಸಿ ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದಾರೆ.
ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು. ಎಲ್ಲಾ ಕೇಸ್ ಗಳನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಬ್ಯಾಂಕ್ ನ ಹಲವು ಶಾಖೆಗಳ ಮೇಲೆ ದಾಳಿ ನಡೆಸಲಾಗಿದೆ.
ಈಗಾಗಲೇ ಬ್ಯಾಂಕ್ ನ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಸೇರಿ ಹಲವರನ್ನು ಬಂಧಿಸಿ ವಿಚಾರಣೆ ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.