ಉತ್ತರ ಪ್ರದೇಶ: 2013ರ ಮುಜಫ್ಫರ್ ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ವಿಕ್ರಮ್ ಸೈನಿ ಮತ್ತು ಇತರ 11 ಮಂದಿಗೆ ವಿಶೇಷ ಎಂಪಿ/ಎಂಎಲ್ಎ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ವಿಶೇಷ ನ್ಯಾಯಾಧೀಶ ಗೋಪಾಲ್ ಉಪಾಧ್ಯಾಯ, ಗಲಭೆ ಮತ್ತು ಇತರ ಅಪರಾಧಗಳಿಗಾಗಿ ವಿಕ್ರಮ್ ಸೈನಿ ಸಹಿತ 12 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿದ್ದು, ಜೈಲುಶಿಕ್ಷೆ ಜೊತೆಗೆ ತಲಾ 10,000 ರೂ.ಗಳ ದಂಡವನ್ನು ವಿಧಿಸಿದರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಪ್ರಕರಣದ ಇತರ 15 ಆರೋಪಿಗಳನ್ನು ಖುಲಾಸೆಗೊಳಿಸಿತು.
ಐಪಿಸಿ ಸೆಕ್ಷನ್ 336 (ಇತರರ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ), 353 (ಸಾರ್ವಜನಿಕ ಸೇವಕನು ತನ್ನ ಕರ್ತವ್ಯವನ್ನು ನಿರ್ವಹಿಸುವುದನ್ನು ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 147 (ದೊಂಬಿ), 148 (ಮಾರಣಾಂತಿಕ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತ ದಂಗೆ) ಮತ್ತು 149 (ಕಾನೂನುಬಾಹಿರ ಗುಂಪುಗೂಡುವಿಕೆ) ಅಡಿಯಲ್ಲಿ 12 ಜನರನ್ನು ದೋಷಿಗಳೆಂದು ಘೋಷಿಸಲಾಗಿದೆ.
ವಿಕ್ರಮ್ ಸೈನಿ ವಿರುದ್ಧವೂ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಕಾವಲ್ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ಶಾಸಕ ಮತ್ತು ಇತರ 27 ಜನರು ವಿಚಾರಣೆಯನ್ನು ಎದುರಿಸುತ್ತಿದ್ದರು
2013ರ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಮುಜಫ್ಫರ್ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಗೌರವ್ ಮತ್ತು ಸಚಿನ್ ಮತ್ತು ಶಹನವಾಜ್ ಎಂಬ ಇಬ್ಬರು ಯುವಕರ ಹತ್ಯೆಯಿಂದ 60 ಮಂದಿ ಮೃತಪಟ್ಟು, 40,000 ಮಂದಿ ನಿರಾಶ್ರಿತರಾಗಿದ್ದರು.