ಕಾರವಾರ: ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯಲ್ಲಿ ಉಂಟಾಗಿರುವ ಸಮಸ್ಯೆ ಎರಡು ತಿಂಗಳಲ್ಲಿ ಬಗೆಹರಿಯಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
108 ಆಂಬುಲೆನ್ಸ್ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಮುಂದುವರಿದ ದೇಶಗಳಲ್ಲಿರುವ ಸೇವೆಗಳ ಬಗ್ಗೆ ವರದಿ ನೀಡಲು ತಾಂತ್ರಿಕ ಸಮಿತಿ ರಚಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
2006-2007 ರಲ್ಲಿ 108 ಆಂಬುಲೆನ್ಸ್ ಸೇವೆ ಆರಂಭಿಸಿ ಇದರ ನಿರ್ವಹಣೆಯನ್ನು ಸತ್ಯಂ ಎಂಬ ಸಂಸ್ಥೆಗೆ ನೀಡಲಾಗಿತ್ತು. ಆದರೆ ಟೆಂಡರ್ ಮೂಲಕ ನಿರ್ವಹಣೆಗೆ ನೀಡಿರಲಿಲ್ಲ. ಆಗ ಯಾವುದೇ ಸಮಸ್ಯೆ ಆಗಿರಲಿಲ್ಲ. ಕಂಪನಿ ನಷ್ಟ ಅನುಭವಿಸಿದ್ದರಿಂದ ಜಿಕೆವಿಕೆ ಸಂಸ್ಥೆಗೆ ನಿರ್ವಹಣೆಗೆ ವಹಿಸಲಾಗಿತ್ತು. ಮೊದಲು ಸರಿಯಾಗಿ ನಡೆಸುತ್ತಿದ್ದ ಸಂಸ್ಥೆ ಇತ್ತೀಚೆಗೆ ಸೇವೆಯಲ್ಲಿ ಏರುಪೇರಾಗುತ್ತಿದೆ ಎಂದರು.
ಕಳೆದ ಎರಡು ತಿಂಗಳಿನಿಂದ ಜಿವಿಕೆ ಸಂಸ್ಥೆ ಸಿಬ್ಬಂದಿಗೆ ವೇತನ ನೀಡಿರಲಿಲ್ಲ. ಸರ್ಕಾರ ಈಗ ಎಲ್ಲರಿಗೂ ವೇತನ ನೀಡಿದೆ. ಇನ್ನೂ ಒಂದೂವರೆ – ಎರಡು ತಿಂಗಳಲ್ಲಿ ಎಲ್ಲ ಸಮಸ್ಯೆಗಳೂ ಬಗೆಹರಿಯಲಿದೆ. ಅಲ್ಲಿಯವರೆಗೆ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ಕಲ್ಪಿಸಲಾಗುವುದು ಎಂದು ಸುಧಾಕರ್ ಆಶ್ವಾಸನೆ ನೀಡಿದ್ದಾರೆ.