ಸಂವಿಧಾನಾತ್ಮಕ ಬಲ ಇಲ್ಲದ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಕೇವಲ ಮೂಗಿಗೆ ತುಪ್ಪ ಸವರುವ ತಂತ್ರ: ಅಬ್ದುಲ್ ಮಜೀದ್ ಮೈಸೂರು

Prasthutha|

ಬೆಂಗಳೂರು: ಮೀಸಲಾತಿ ಪ್ರಮಾಣವನ್ನು 50% ಮೀರಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳು ಕಣ್ಣ ಮುಂದೆ ಇದ್ದಾಗಲೂ, ಮಹಾರಾಷ್ಟ್ರ ಮತ್ತು ತೆಲಂಗಾಣ ಮಾಡಿದ ಇತ್ತೀಚಿನ ಪ್ರಯತ್ನಗಳನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದ ತಾಜಾ ಉದಾಹರಣೆಗಳು ಕಣ್ಣ ಮುಂದೆ ಇದ್ದಾಗಲೂ  ದಲಿತರನ್ನು ವಂಚಿಸಿ ಮತ ಪಡೆಯುವ ಉದ್ದೇಶದಿಂದ ಕರ್ನಾಟಕದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್.ಸಿ / ಎಸ್.ಟಿ ಮೀಸಲಾತಿಯನ್ನು 2% ಹಾಗೂ 4% ನಂತೆ ಹೆಚ್ಚಳ ಮಾಡಿದೆ. ಇದು ನ್ಯಾಯಾಲಯದಲ್ಲಿ ಮಾನ್ಯವಾಗುವುದಿಲ್ಲ ಎಂದು ತಿಳಿದಿದ್ದರೂ ದಲಿತರ ಮೂಗಿಗೆ ತುಪ್ಪ ಸವರಲು ಮಾಡಿರುವ ತಂತ್ರ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು  ಹೇಳಿದ್ದಾರೆ.

- Advertisement -

ಬಿಜೆಪಿಗೆ ಸಾಮಾಜಿಕ ನ್ಯಾಯದ ಬಗ್ಗೆ ನಿಜವಾದ ಕಳಕಳಿ ಇದ್ದರೆ 2005ರ ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲಿ. ಆ ಮೂಲಕ ಕೇವಲ ಬಲಿಷ್ಟ ಜಾತಿಗಳು ಮೀಸಲಾತಿಯ ಅತಿ ಹೆಚ್ಚು ಫಲಾನುಭವಿಗಳಾಗುವುದನ್ನು ತಪ್ಪಿಸಿ, ದುರ್ಬಲ ಜಾತಿಗಳಿಗೆ ಮೀಸಲಾತಿಯ ಫಲ ಸಿಗುವಂತೆ ಮಾಡಲಿ. ಬಾಬಾ ಸಾಹೇಬರ ಕನಸು ಕೂಡ ಮೀಸಲಾತಿ ದುರ್ಬಲ ಸಮುದಾಯಗಳನ್ನು ಸಾಮಾಜಿಕ, ಆರ್ಥಿಕವಾಗಿ ಮೇಲೆತ್ತುವುದೇ ಆಗಿತ್ತು ಎಂದು ಅಬ್ದುಲ್ ಮಜೀದ್ ಹೇಳಿದರು.

ಈ ಸರ್ಕಾರಕ್ಕೆ ನಿಜವಾಗಿಯೂ ದಲಿತರ ಮೀಸಲಾತಿ ಹೆಚ್ಚಿಸುವ ಇರಾದೆ ಇದ್ದರೆ ಮೀಸಲಾತಿ ಶೇಕಡ 50ರ ಮಿತಿ ದಾಟಬಾರದು ಎನ್ನುವ ನಿಬಂಧನೆಯನ್ನು ಸದನದ ಮೂಲಕ ಹೆಚ್ಚಿಸಬಹುದು. ಮಾತು ಮಾತಿಗೂ ಡಬಲ್ ಇಂಜಿನ್ ಸರ್ಕಾರ ಎನ್ನುವವರು ಈ ವಿಚಾರವಾಗಿ ಮಾತ್ರ ಕೈಕಟ್ಟಿ ಕೂತು, ನೆಪ ಮಾತ್ರಕ್ಕೆ ಹೆಚ್ಚಳ ಮಾಡಿ, ದಲಿತರನ್ನು ವಂಚಿಸುತ್ತಿದ್ದಾರೆ. ನಾಳೆ ಕೋರ್ಟ್ ಅದನ್ನು ಹೊಡೆದು ಹಾಕಲಿದೆ ಎಂದು ಬಿಜೆಪಿಗೂ ಗೊತ್ತಿದೆ. ಆದರೆ ಅಷ್ಟರಲ್ಲಿ ಅದರಿಂದ ಪಡೆಯಬಹುದಾದ ರಾಜಕೀಯ ಲಾಭ ಪಡೆದುಬಿಡುವ ಹುನ್ನಾರ ಇದಾಗಿದೆ ಎಂದು ಅವರು ಆರೋಪಿಸಿದರು.

- Advertisement -

ಇದರ ಜೊತೆಗೆ ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗ್ಗೆ ಸಾಚಾರ್ ಸಮಿತಿ ನೀಡಿದ ವರದಿಯನ್ನು ಜಾರಿಗೊಳಿಸುವ ಬಗ್ಗೆ 2004ರಲ್ಲಿ ರಂಗನಾಥ್ ಮಿಶ್ರಾ ನೀಡಿದ ವರದಿಯನ್ನು ಸರ್ಕಾರ ಜಾರಿಗೆ ತರಲಿ. ಅದರಲ್ಲಿ ಮುಸ್ಲಿಮರಿಗೆ ಶೇಕಡ 10 ಮತ್ತು ಉಳಿದ ಅಲ್ಪಸಂಖ್ಯಾತರಿಗೆ ಶೇಕಡ ಐದರಷ್ಟು ಮೀಸಲಾತಿ ನೀಡಬೇಕು ಎಂದು ಅವರು ಶಿಫಾರಸ್ಸು ಮಾಡಿದ್ದಾರೆ. ಮೀಸಲಾತಿ ಶೇಕಡ 50ರಷ್ಟು ಮೀರಬಾರದು ಎಂಬ ನಿಯಮ ಅದಕ್ಕೆ ಅಡ್ಡಿಯಾಗುವುದಾದರೆ ಹಿಂದುಳಿದ ವರ್ಗಗಳ ಶೇಕಡ 27 ಮೀಸಲಾತಿಯಲ್ಲಿ ಶೇಕಡ 8.4 ಭಾಗವನ್ನು ಅಲ್ಪಸಂಖ್ಯಾತರಿಗೆ, ಮುಖ್ಯವಾಗಿ ಮುಸ್ಲಿಮರಿಗೆ ಒದಗಿಸಬೇಕು ಎಂದು ಮಿಶ್ರಾ ವರದಿ ಶಿಫಾರಸು ಮಾಡುತ್ತದೆ. ಆದರೆ ಯಾವುದೇ ಪಕ್ಷದ ಸರ್ಕಾರವೂ ಕೂಡ ಈ ವರದಿಯನ್ನು ಜಾರಿ ಮಾಡಲು ಪ್ರಯತ್ನ ಮಾಡಿಲ್ಲ ಎಂದು ಅವರು ಹೇಳಿದರು.

ಆದರೆ ಶತಮಾನಗಳಿಂದ ಎಲ್ಲ ಸವಲತ್ತುಗಳನ್ನು ಅನುಭವಿಸಿಕೊಂಡು ಬರುತ್ತಿರುವ ಸಾಮಾನ್ಯ ವರ್ಗ, ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣ ವರ್ಗಕ್ಕೆ ಉಡುಗೊರೆಯ ರೀತಿಯಲ್ಲಿ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮನುವಾದಿ ಬಿಜೆಪಿ ಸರ್ಕಾರ ಶೇಕಡ 10ರಷ್ಟು ಮೀಸಲಾತಿಯನ್ನು ನೀಡಿದೆ. ಇದು ಮೀಸಲಾತಿಯ ಮೂಲ ಉದ್ದೇಶವನ್ನು ಬುಡಮೇಲು ಮಾಡುವ ಕಾರ್ಯ. ಮೀಸಲಾತಿಯ ಉದ್ದೇಶ ಸಾಮಾಜಿಕ ನ್ಯಾಯವಾಗಿದೆ. ಆದರೆ ಆರ್ಥಿಕ ಸ್ಥಿತಿಗತಿಗೂ ಮೀಸಲಾತಿ ವಿಸ್ತರಿಸಿ ಬಿಜೆಪಿ ಸಂವಿಧಾನ ವಿರೋಧಿ ಕೆಲಸ ಮಾಡಿದೆ ಎಂದರು ಅವರು ಹೇಳಿದರು. ಅದೇ ಸಂದರ್ಭದಲ್ಲಿ ಸಂವಿಧಾನಾತ್ಮಕವಾಗಿ ರಚನೆಯಾದ ಆಯೋಗಗಳು ನೀಡಿದ ವರದಿಗಳನ್ನು ಮಾತ್ರ ಧೂಳು ಹಿಡಿಸುತ್ತ ಕೂತಿದೆ ಎಂದು ಅಬ್ದುಲ್ ಮಜೀದ್ ಹೇಳಿದರು.

ಜನರು, ಅದರಲ್ಲೂ ಮುಖ್ಯವಾಗಿ ದಲಿತರು ಬಿಜೆಪಿಯ ಈ ಕುತಂತ್ರ ಅರಿತು ಡಬಲ್ ಇಂಜಿನ್ ಸರ್ಕಾರದ ಇಂಜಿನ್ ಸೀಜ್ ಮಾಡಲಿದ್ದಾರೆ ಎಂದು ಅವರು ಹೇಳಿದರು.



Join Whatsapp