ಮಂಗಳೂರು: 2022-23ನೇ ಸಾಲಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಜಾರಿಯಿರುವ ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ಬಸ್ ಪಾಸ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಿ, ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಪಾಸುಗಳ ವಿತರಣೆ ಮಾಡಲಾಗುವುದು.
ಈ ಯೋಜನೆಯಡಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಯಾವುದೇ ಜಿಲ್ಲೆಯಲ್ಲಿ ನೋಂದಣಿಯಾಗಿದ್ದರೂ ಅವರು ಇಚ್ಛಿಸುವ ಪಾಸಿನಲ್ಲಿ ನಮೂದಿಸಲಾಗುವ ಪ್ರಾರಂಭಿಕ ಸ್ಥಳದಿಂದ ಗರಿಷ್ಟ 45 ಕಿ.ಮೀ ನಷ್ಟು ಯಾವುದೇ ಮಾರ್ಗದಲ್ಲಿಯಾದರೂ ಉಚಿತವಾಗಿ ಪ್ರಯಾಣಿಸಲು ಅವಕಾಶವಿರುತ್ತದೆ.
ಈ ಪಾಸುಗಳನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿಮಾಣ ಕಾರ್ಮಿಕ ಮಂಡಳಿಯು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ವಿತರಿಸಲಾಗುತ್ತದೆ.
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅವರ ಹತ್ತಿರವಿರುವ ಗ್ರಾಮ-1, ಕರ್ನಾಟಕ-1 ಕೇಂದ್ರಗಳ ಮುಖಾಂತರ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಮಾದರಿಯ ಬಸ್ ಪಾಸುಗಳನ್ನು ಪಡೆಯಬಹುದು. ಗ್ರಾಮ-1, ಕರ್ನಾಟಕ-1 ಕೇಂದ್ರಗಳಿಗೆ ಭೇಟಿ ನೀಡುವ ಕಾರ್ಮಿಕರು ತಮ್ಮ ನೋಂದಣಿಯಾದ ಕಾರ್ಮಿಕರ ನೋಂದಾಯಿತ ಫಲಾನುಭವಿಯ ಗುರುತಿನ ಹಾಗೂ ಆಧಾರಕಾರ್ಡ್ಗೆನ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ಮೊಬೈಲ್ನ್ನು ತೆಗೆದುಕೊಂಡು ಹೋಗಬೇಕು. ಗ್ರಾಮ- ಕೇಂದ್ರದಲ್ಲಿ ಫಲಾನುಭವಿಯ ಗುರುತಿನ ಚೀಟಿಯನ್ನು ದಾಖಲಿಸುತ್ತಿದ್ದಂತೆ ಅದರಲ್ಲಿ ನೋಂದಣಿಯಾದ ಮೊಬೈಲ್ಗೆ ಒಟಿಪಿ ಬರಲಿದ್ದು, ಆ ಒಟಿಪಿಯನ್ನು ದಾಖಲಿಸಿದರೆ ಅರ್ಜಿ ಸಲ್ಲಿಸಿದಂತಾಗುತ್ತದೆ.
ಉಚಿತ ಬಸ್ ಪಾಸು ಪಡೆದ ನೋಂದಾಯಿತ ಕಟ್ಟಡ ಮತ್ತು ಇತರೆ ನಿಮಾಣ ಕಾರ್ಮಿಕರು ಪಾಸಿನೊಂದಿಗೆ ಕರಾರಸಾ ನಿಗಮ ಅಥವಾ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ನಗರ, ಸಾಮಾನ್ಯ ಅಥವಾ ಹೊರವಲಯ ಹಾಗೂ ವೇಗದೂತ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ.
ಪಾಸಿನ ಮಾನ್ಯತಾ ಅವಧಿ ಮೂರು ತಿಂಗಳಾಗಿರುತ್ತದೆ. ಮೂರು ತಿಂಗಳ ಚಾಲ್ತಿ ಅವಧಿ ಮುಕ್ತಾಯವಾದ ನಂತರ ಮರು ಅವಧಿಗೆ ಹೊಸದಾಗಿ ಅರ್ಜಿ ಸಲ್ಲಿಸಿ ಸೇವಾಸಿಂಧು ಪೋರ್ಟಲ್ ಮೂಲಕ ಪಾಸು ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ.
ಈ ಪಾಸುಗಳ ವಿತರಣೆ ನಿರ್ವಹಣೆ ಹಾಗೂ ಪಾಸಿನ ನವೀಕರಣ ಕೆಲಸವನ್ನು ರಾಜ್ಯದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯವರು ನಿರ್ವಹಿಸಲಿದ್ದಾರೆ.
ಪಾಸು ನವೀಕರಣದ ಸಮಯದಲ್ಲಿ ಕಾರ್ಮಿಕ ಕಲ್ಯಾಣ ಇಲಾಖೆಯವರು ನೀಡಿರುವ ಗುರುತಿನ ಚೀಟಿ ನವೀಕರಣವಾಗಿರುವುದನ್ನು ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸಿ ಪಾಸನ್ನು ಮುಂದಿನ ಅವಧಿಗೆ ಸೇವಾಸಿಂಧು ಇಲಾಖೆಯವರು ನವೀಕರಣ ಮಾಡಲಿದ್ದಾರೆ.
ಫಲಾನುಭವಿಯು ಉಚಿತ ಬಸ್ ಪಾಸನ್ನು ಕಳೆದುಕೊಂಡಲ್ಲಿ ಒಮ್ಮೆಗೆ ಮಾತ್ರ ಕರ್ನಾಟಕ-1 ಕೇಂದ್ರಕ್ಕೆ ತೆರಳಿ ಮನವಿ ಸಲ್ಲಿಸಿದಾಗ ತಂತ್ರಾಂಶವನ್ನು ಪರಿಶೀಲಿಸಿ ಬಸ್ ಪಾಸು ಅವಧಿಗೆ ಸ್ಮಾರ್ಟ್ ಕಾರ್ಡ್ ಮುದ್ರಣದ ವೆಚ್ಚವನ್ನು ಮಾತ್ರ ಪಡೆದು ಹೊಸದಾಗಿ ಪಾಸನ್ನು ಸೇವಾ ಸಿಂಧು ಸಂಸ್ಥೆಯವರು ನೀಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.