ನವದೆಹಲಿ: ಶಿವಸೇನಾ ಪಕ್ಷದ ಹೆಸರು, ಚಿಹ್ನೆಯನ್ನು ಭಾರತೀಯ ಚುನಾವಣಾ ಆಯೋಗ ಸ್ಥಗಿತಗೊಳಿಸಿರುವ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಉದ್ಧವ್ ಠಾಕ್ರೆ ನೇತೃತ್ವದ ಬಣ ದೆಹಲಿ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದೆ.
ಭಾರತೀಯ ಚುನಾವಣಾ ಆಯೋಗವು ಅಕ್ಟೋಬರ್ 8ರಂದು ನೀಡಿದ ಆದೇಶವನ್ನು ಪ್ರಶ್ನಿಸಿ ಠಾಕ್ರೆ ಅರ್ಜಿ ಸಲ್ಲಿಸಿದ್ದು, ಚುನಾವಣಾ ಆಯೋಗದ ಆದೇಶವು ನೈಸರ್ಗಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಯಾವುದೇ ರೀತಿಯಲ್ಲೂ ವಿಚಾರಣೆ ನಡೆಸದೆ ಆದೇಶ ನೀಡಲಾಗಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.
ನವೆಂಬರ್ 3 ರಂದು ನಡೆಯಲಿರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಶಿವಸೇನೆಯ ಎರಡೂ ಬಣಗಳು ಪಕ್ಷದ ಹೆಸರು ಮತ್ತು ಅದರ ಚುನಾವಣಾ ಚಿಹ್ನೆಯನ್ನು ಬಳಸದಂತೆ ಚುನಾವಣಾ ಆಯೋಗ ನಿರ್ಬಂಧಿಸಿತ್ತು.
ಈ ಮಧ್ಯೆ ತ್ರಿಶೂಲ, ಸುಡುವ ಜ್ಯೋತಿ ಮತ್ತು ಸೂರ್ಯ ಉದಯಿಸುವ ಚಿತ್ರ ಎಂಬ ಮೂರು ಚಿಹ್ನೆಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಠಾಕ್ರೆ ಬಣಕ್ಕೆ ಚುನಾವಣಾ ಆಯೋಗ ಸೂಚಿಸಿತ್ತು.