ಐಐಟಿ: ಹಿಂದಿ ಅಥವಾ ಪ್ರಾದೇಶಿಕ ಭಾಷೆ

Prasthutha|

ನವದೆಹಲಿ: ಐಐಟಿಯಂತಹ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕೆಂದು  ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ. 

- Advertisement -

ಹಿಂದಿ ಭಾಷಿಕ ಪ್ರದೇಶದಲ್ಲಿ ಹಿಂದಿಯನ್ನೂ, ಇತರ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯನ್ನೂ ಬಳಸಬೇಕು ಹಾಗೂ  ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ  ಹಿಂದಿಯನ್ನೂ ಸೇರಿಸಬೇಕು ಎಂದು ವರದಿಯಲ್ಲಿ ಒತ್ತಾಯ ಮಾಡಲಾಗಿದೆ. 

ಸಂಸದೀಯ ಸಮಿತಿಯ 11ನೇ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಲಾಗಿದ್ದು,  ಎಲ್ಲ ರಾಜ್ಯಗಳಲ್ಲಿಯೂ ಇಂಗ್ಲಿಷ್‌ ಗಿಂತ ಸ್ಥಳೀಯ ಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದೂ ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ  ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಬಳಕೆಯನ್ನು ಐಚ್ಛಿಕಗೊಳಿಸಬೇಕು ಎಂದು ವರದಿ ಸಲಹೆ ನೀಡಿದೆ. 

- Advertisement -

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಸಮಿತಿಯು ಶಿಫಾರಸುಗಳನ್ನು ಮಾಡಿದೆ. ಅದರ ಅನ್ವಯವೇ ಅಧಿಕೃತ ಭಾಷೆ ಅಥವಾ ಪ್ರಾದೇಶಿಕ ಭಾಷೆಗಳು ಬೋಧನಾ ಮಾಧ್ಯಮವಾಗಬೇಕು ಎಂದು ಸಲಹೆ ಕೊಟ್ಟಿದೆ ಎಂದು ಸಮಿತಿಯ ಉಪ ಮುಖ್ಯಸ್ಥ ಭರ್ತೃಹರಿ ಮಹತಾಬ್‌ ಹೇಳಿದ್ದಾರೆ. 

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಹಿಂದಿ ಭಾಷಾ ಬಳಕೆಯ ಆಧಾರದಲ್ಲಿ ‘ಎ’, ‘ಬಿ’ ಮತ್ತು ‘ಸಿ’ ಎಂದು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ

‘ಎ’ ವರ್ಗದ ರಾಜ್ಯಗಳು: ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಛತ್ತೀಸಗಢ, ಉತ್ತರಾಖಂಡ, ಜಾರ್ಖಂಡ್‌, ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ, ದೆಹಲಿ, ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪಗಳು

‘ಬಿ’ ವರ್ಗದ ರಾಜ್ಯಗಳು: ಗುಜರಾತ್‌, ಮಹಾರಾಷ್ಟ್ರ, ಪಂಜಾಬ್‌ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ಡಾಮನ್‌ ಮತ್ತು ಡಿಯು, ದಾದ್ರಾ ಮತ್ತು ನಗರ ಹವೇಲಿ

‘ಸಿ’ ವರ್ಗದ ರಾಜ್ಯಗಳು: ದೇಶದ ಇತರ ಎಲ್ಲ ರಾಜ್ಯಗಳು ಈ ವರ್ಗದಲ್ಲಿ ಬರುತ್ತವೆ

‘ಎ’ ವರ್ಗದ ರಾಜ್ಯಗಳಲ್ಲಿ (ಹಿಂದಿ ಭಾಷಿಕ ರಾಜ್ಯಗಳು) ಹಿಂದಿಗೆ ಗೌರವಾರ್ಹ ಸ್ಥಾನ ಕೊಡಬೇಕು, ಈ ರಾಜ್ಯಗಳಲ್ಲಿ ಹಿಂದಿ ಬಳಕೆ ಶೇಕಡ ನೂರರಷ್ಟು ಇರಬೇಕು.  ಹಿಂದಿ ಭಾಷಿಕ ರಾಜ್ಯಗಳಲ್ಲಿರುವ ಐಐಟಿಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿಯು ಬೋಧನಾ ಮಾಧ್ಯಮವಾಗಬೇಕು. ಇತರ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಯು ಬೋಧನಾ ಮಾಧ್ಯಮವಾಗಬೇಕು. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯ ಮುಂತಾದ ಸಂಸ್ಥೆಗಳಲ್ಲಿ ಈಗ ಶೇ 20ರಿಂದ ಶೇ 30ರಷ್ಟು ಮಾತ್ರ ಹಿಂದೆ ಬಳಕೆ ಆಗುತ್ತಿದೆ. ಇನ್ನು ಮುಂದೆ ಅದು ಶೇ 100ಕ್ಕೆ ಏರಬೇಕು ಎಂದು ಮಹತಾಬ್‌ ಹೇಳಿದ್ದಾರೆ.



Join Whatsapp