ನವದೆಹಲಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್ ಮತ್ತು ಅಭಯ್ ಎಸ್. ಓಕಾ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು, ಇದು ಅರ್ಜಿದಾರರಿಗೆ ಯಾವ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕೇಳಿದೆ.
ಇದು ನ್ಯಾಯಾಲಯದ ಕೆಲಸವೇ? ನೀವು ಅಂತಹ ಅರ್ಜಿಗಳನ್ನು ಏಕೆ ಸಲ್ಲಿಸುತ್ತೀರಿ? ಯಾವ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ? ನೀವು ನ್ಯಾಯಾಲಯಕ್ಕೆ ಬಂದಿರುವುದರಿಂದ ನಾವು ಕಾನೂನನ್ನು ಗಾಳಿಗೆ ತೂರಬೇಕೇ? ಎಂದು ಪೀಠ ಪ್ರಶ್ನಿಸಿದೆ.
ದಂಡ ವಿಧಿಸುವುದಾಗಿ ಪೀಠವು ವಕೀಲರಿಗೆ ಎಚ್ಚರಿಕೆ ನೀಡಿದ ನಂತರ ಅರ್ಜಿದಾರರು ತಮ್ಮ ಮನವಿಯನ್ನು ಹಿಂತೆಗೆದುಕೊಂಡರು.
ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಎನ್ ಜಿಒ ಗೋವಂಶ್ ಸೇವಾ ಸದನ್ ಹಾಗೂ ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದರು.