ಮುಸ್ಲಿಮರ ಹತ್ಯೆ, ಬಹಿಷ್ಕಾರಕ್ಕೆ ಬಿಜೆಪಿ ಸಂಸದ ಕರೆ: ವೀಡಿಯೋ ವೈರಲ್

Prasthutha|

ಹೊಸದಿಲ್ಲಿ: ದೇಶದಲ್ಲಿರುವ ಮುಸ್ಲಿಮರ ಸಾಮೂಹಿಕ ಹತ್ಯೆ ನಡೆಸಿ ವ್ಯಾಪಾರ ಬಹಿಷ್ಕರಿಸುವಂತೆ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಕರೆ ನೀಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -

ಈಶಾನ್ಯ ದೆಹಲಿಯ ದಿಲ್ಯಾದ್ ಗಾರ್ಡನ್’ನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಸಂಘಪರಿವಾರ ಭಾನುವಾರ ಆಯೋಜಿಸಿದ್ದ ವಿರಾಟ್ ಹಿಂದೂ ಸಭಾ ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ಉಲ್ಲೇಖಿಸಿ ಮಾತನಾಡಿದ ಅವರು, ಮುಸ್ಲಿಮರನ್ನುಸಂಪೂರ್ಣವಾಗಿ ಬಹಿಷ್ಕರಿಸಬೇಕು. ಇದನ್ನು ನೀವು ಒಪ್ಪುತೀರಾ? ಒಪ್ಪುವವರು ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.

ನಾವೆಲ್ಲರೂ ಮುಸ್ಲಿಮರನ್ನು ಬಹಿಷ್ಕರಿಸುತ್ತೇವೆ. ಅವರ ಅಂಗಡಿಗಳಿಂದ ಏನನ್ನು ಖರೀದಿಸುವುದಿಲ್ಲ. ಅವರಿಗೆ ಉದ್ಯೋಗ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಅವರು ನೆರೆದವರಿಗೆ ಸೂಚಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಲವು ಮಂದಿ ದೂರು ದಾಖಲಿಸಿದ್ದು, ವೈರಲ್ ವೀಡಿಯೋದ ಕುರಿತು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

ಈ ಕಾರ್ಯಕ್ರಮದಲ್ಲಿ 2020ರ ದೆಹಲಿ ಹತ್ಯಾಕಾಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲೋನಿಯ ಬಿಜೆಪಿ ಶಾಸಕ ನಂದ್ ಕಿಶೋರ್ ಗುಜ್ಜರ್ ಅವರು ಕೂಡ ಭಾಗವಹಿಸಿ, ಜನರನ್ನು ಪ್ರಚೋದಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಕಿಶೋರ್ ಗುಜ್ಜರ್ , ದೆಹಲಿ ಹಿಂಸಾಚಾರದಲ್ಲಿ ಮುಸ್ಲಿಮರನ್ನು ಕೊಲ್ಲಲು ದೆಹಲಿಗೆ 2500 ಜನರನ್ನು ಕರೆದು ತಂದ ಆರೋಪ ನನ್ನ ಮೇಲಿದೆ. ಮುಸ್ಲಿಮರನ್ನು ಕೊಲ್ಲಲು ಪ್ರಯತ್ನಿಸಿದ್ದೇನೆ ಎಂಬ ಆರೋಪದಡಿಯಲ್ಲಿ ನನ್ನ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಾವು ಈ ಹಿಂದೆ ಮುಸ್ಲಿಮರನ್ನು ಕೊಂದಿದ್ದೇವೆ. ಇನ್ನು ಮುಂದೆಯೂ ಅವರನ್ನು ಕೊಲ್ಲುತ್ತೇವೆ. ಆದರೆ ಭಾರತವನ್ನು ಮಾತೆ ಆಗಿ ಕಾಣುವವರನ್ನು ನಾವು ಏನು ಮಾಡುವುದಿಲ್ಲ. ಭಾರತದಲ್ಲಿ ಹಿಂಸೆ ಹರಡುವವರನ್ನು ಕೊಲ್ಲತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದು ಸೂಚಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಸಮಾರಂಭದಲ್ಲಿ ಇತರ ಭಾಷಣಕಾರರು ಸಹ ಮುಸ್ಲಿಮರ ಹತ್ಯಾಕಾಂಡಗಳಿಗೆ ಕರೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.



Join Whatsapp