ಸೂರತ್: ಗುಜರಾತಿನಲ್ಲಿ ಕಾಂಗ್ರೆಸ್ ಶಾಸಕ, ಬುಡಕಟ್ಟು ನಾಯಕ ಅನಂತ್ ಪಟೇಲ್ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದ್ದು, ಈ ಕುಕೃತ್ಯದ ಹಿಂದೆ ಬಿಜೆಪಿಯ ಕೈವಾಡವಿದೆ ಎಂಬ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಆಡಳಿತರೂಢ ಬಿಜೆಪಿಯ ವಿರುದ್ಧ ಯಾರೋ ಧ್ವನಿಯೆತ್ತಿದರೂ ಅವರನ್ನುಗುರಿಯಾಗಿಸಿ ಹಲ್ಲೆ ನಡೆಸಿದ ಬಳಿಕ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಶಾಸಕ ಅನಂತ್ ಪಟೇಲ್ ದೂರಿದ್ದಾರೆ.
ಸಭೆಯೊಂದರಲ್ಲಿ ಭಾಗವಹಿಸುವ ಸಲುವಾಗಿ ನವಸಾರಿಯ ಖೇರ್ಗಾಮ್’ಗೆ ಬಂದಾಗ ಜಿಲ್ಲಾ ಪಂಚಾಯತ್ ಮುಖ್ಯಸ್ಥರು ಮತ್ತು ಅವರ ಗೂಂಡಾಪಡೆ ನನ್ನ ಕಾರನ್ನು ಪುಡಿಗೈದು ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಜಾತಿ ನಿಂದನೆಯನ್ನು ಮಾಡಿದ್ದಾರೆ ಎಂದು ಆರೋಪಿಸಿದ ಅನಂತ್, ನೀವು ಆದಿವಾಸಿಗಳ ಪರ ವಕಾಲತ್ತು ವಹಿಸುತ್ತಿದ್ದೀರಿ. ಆದಿವಾಸಿಯನ್ನು ಇಲ್ಲಿಗೆ ಬರಲು ಬಿಡುವುದಿಲ್ಲ ಎಂದು ನಿಂದಿಸಿ ಜಿಲ್ಲಾ ಪಂಚಾಯತ್ ಮುಖ್ಯಸ್ಥರು ಮತ್ತು ಆತನ ಗೂಂಡಾಗಳು ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕನಿಗೆ ಹಲ್ಲೆಸಿರುವ ಘಟನೆ ಸುದ್ದಿಯಾಗುತ್ತಿದ್ದಂತೆ, ಅವರ ಬೆಂಬಲಕ್ಕೆ ಸಾರ್ವಜನಿಕರು ದೌಡಾಯಿಸುತ್ತಾರೆ ಮತ್ತು ಈ ಅನ್ಯಾಯದ ವಿರುದ್ಧ ಶನಿವಾರ ರಾತ್ರಿ ಪ್ರತಿಭಟನೆಯನ್ನು ಮಾಡುತ್ತಾರೆ. ಅಲ್ಲದೆ ಈ ದುಷ್ಕೃತ ಮೆರೆದ ಜಿಲ್ಲಾ ಪಂಚಾಯತ್ ಮುಖ್ಯಸ್ಥ ಮತ್ತು ಆತನ ಗೂಂಡಾಗಳನ್ನು ಬಂಧಿಸದಿದ್ದರೆ 14 ಜಿಲ್ಲೆಗಳ ಹೆದ್ದಾರಿಗಳನ್ನುತಡೆದು ಪ್ರತಿಭಟನೆ ನಡೆಸುವುದಾಗಿ ಆಕ್ರೋಶಿತ ಪ್ರತಿಭಟನಾಕಾರರು ಎಚ್ಚರಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನವಸಾರಿ ಪೊಲೀಸ್ ಉಪ ವರಿಷ್ಠಾಧಿಕಾರಿ, ತಪ್ಪಿತಸ್ಥರನ್ನು ಮೂರು ದಿನಗಳಲ್ಲಿ ಬಂಧಿಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.