ಮುಂಬೈ: ಮಗುವಿಗೆ ಜನ್ಮ ನೀಡುವಂತೆ ಮಹಿಳೆಗೆ ಒತ್ತಾಯಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಮಹಿಳೆಯೊಬ್ಬಳು ತನ್ನ ಪತಿಯ ಅನುಮತಿಯಿಲ್ಲದೇ ಗರ್ಭಪಾತ ಮಾಡಿಸಿಕೊಂಡರೆ ಅದನ್ನು ಹಿಂದೂ ವಿವಾಹ ಕಾಯ್ದೆಯಡಿ ಕ್ರೌರ್ಯ ಎಂದು ಕರೆಯಬಹುದೇ ಎಂಬ ಪ್ರಶ್ನೆಯನ್ನು ನ್ಯಾಯಾಲಯದ ಮುಂದಿರಿಸಲಾಗಿತ್ತು.
ಈ ಕುರಿತಂತೆ ನ್ಯಾಯಮೂರ್ತಿಗಳಾದ ಅತುಲ್ ಚಂದೂರ್ಕರ್ ಮತ್ತು ಊರ್ಮಿಳಾ ಜೋಶಿ-ಫಾಲ್ಕೆ ಅವರ ವಿಭಾಗೀಯ ಪೀಠವು ಈ ಆದೇಶವನ್ನು ನೀಡಿದೆ.
ಸಂತಾನೋತ್ಪತ್ತಿ ಕುರಿತಂತೆ ಮಹಿಳೆ ಹೊಂದಿರುವ ಆಯ್ಕೆಯು ಸಂವಿಧಾನದ 21ನೇ ವಿಧಿಯಲ್ಲಿ ಅಡಕವಾಗಿರುವ ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಪೀಠ ಹೇಳಿದೆ. ಅಲ್ಲದೆ ವಿವಾಹದ ನಂತರ ಕೆಲಸಕ್ಕೆ ಹೋಗಲು ಬಯಸುವ ಮಹಿಳೆಯನ್ನು ಕ್ರೌರ್ಯ ಎಂದು ಕರೆಯಲಾಗುವುದಿಲ್ಲ ಎಂದೂ ಅದು ಅಭಿಪ್ರಾಯ ಪಟ್ಟಿದೆ.
ಈ ಕುರಿತಂತೆ ಪತಿಯೊಬ್ಬ ಪತ್ನಿ ತನ್ನ ಅನುಮತಿಯಿಲ್ಲದೆ ಗರ್ಭಪಾತ ಮಾಡಿಸಿಕೊಂಡಿದ್ದಾಳೆಂದು ಹೇಳಿ ಈ ಕಾರಣಕ್ಕಾಗಿ ಹಿಂದು ವಿವಾಹ ಕಾಯಿದೆಯ ಸೆಕ್ಷನ್ 13(1)(ಐಎ) ಮತ್ತು 13(1)(ಐಬಿ) ಅನ್ವಯ ವಿಚ್ಛೇದನಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು ಸಂತಾನೋತ್ಪತ್ತಿ ಕುರಿತಂತೆ ತನಗೆ ಆಯ್ಕೆಯ ಹಕ್ಕಿದೆ ಎಂಬ ಪತ್ನಿಯ ವಾದವನ್ನು ಒಪ್ಪಿಕೊಂಡಿದೆ.
ಏನಿದು ಪ್ರಕರಣ:
47 ವರ್ಷದ ವೃತ್ತಿಯಲ್ಲಿ ಶಿಕ್ಷಕನಾಗಿರುವ ಪತಿ, ತನ್ನಂತೆಯೇ ಶಿಕ್ಷಕಿಯಾಗಿರುವ ಪತ್ನಿಯ ಮೇಲೆ ಕ್ರೂರತೆ ಮತ್ತು ತನ್ನನ್ನು ತ್ಯಜಿಸಿದ ಆರೋಪ ಹೊರಿಸಿ ವಿಚ್ಛೇದನಕ್ಕೆ ಅರ್ಜೀ ಸಲ್ಲಿಸಿದ್ದ. 2001 ರಲ್ಲಿ ವಿವಾಹವಾದಂದಿನಿಂದ ಪತ್ನಿ ಉದ್ಯೋಗಕ್ಕೆ ಹೋಗುವುದನ್ನು ಮುಂದುವರಿಸಲು ಬಯಸಿದ್ದಳು ಹಾಗೂ ಎರಡನೇ ಬಾರಿ ಗರ್ಭವತಿಯಾದಾಗ ತನ್ನ ಅನುಮತಿಯಿಲ್ಲದೆ ಗರ್ಭಪಾತ ಮಾಡಿಸಿಕೊಂಡಿದ್ದು ತನ್ನ ಪಾಲಿಗೆ ಕ್ರೂರತೆಯಾಗಿದೆ. ಆಕೆ ತನ್ನ ಪುತ್ರನೊಂದಿಗೆ 2004 ರಲ್ಲಿ ತನ್ನನ್ನು ತ್ಯಜಿಸಿದ್ದಳು ಎಂದೂ ಆತ ಹೇಳಿದ್ದ.
ಪತ್ನಿ ತನ್ನ ವಕೀಲರ ಮೂಲಕ ವಾದ ಮಂಡನೆಯಲ್ಲಿ ತಾನು ಒಂದು ಮಗುವನ್ನು ಹೆತ್ತಿದ್ದಾಗಿಯೂ, ಎರಡನೇ ಬಾರಿ ಗರ್ಭವತಿಯಾದಾಗ ಅನಾರೋಗ್ಯವಿಲ್ಲದೆ ಗರ್ಭಪಾತವಾದದ್ದಾಗಿಯೂ ಆಕೆ ತಿಳಿಸಿದ್ದಳು. ಅಲ್ಲದೆ ಪತಿ ತನ್ನನ್ನು ಮನೆಗೆ ವಾಪಸ್ ತರಲು ಅಥವಾ ಪುತ್ರನ ಖರ್ಚಿಗೆ ಹಣ ನೀಡಲು ಮುಂದೆ ಬಂದಿಲ್ಲ, ಪತಿಯ ಸಹೋದರಿಯರು ಸದಾ ತನ್ನ ಶೀಲ ಶಂಕಿಸುತ್ತಿದ್ದರು ಎಂದೂ ಆಕೆ ದೂರಿದ್ದಳು.
ಒಂದು ಪಕ್ಷ ಹೇಳಿದ ಮಾತ್ರಕ್ಕೆ ಅವರ ವಿವಾಹ ಮುರಿದು ಬಿದ್ದಿದೆ ಎಂದು ಹೇಳಲು ಸಾಧ್ಯವಿಲ್ಲ, ಮೇಲಾಗಿ ಮಹಿಳೆ ಅದಾಗಲೇ ಒಂದು ಮಗುವನ್ನು ಹೆತ್ತಿರುವುದರಿಂದ ಹಾಗೂ ವ್ಯಕ್ತಿ ತನ್ನ ಪತ್ನಿಯ ಮೇಲೆ ಗರ್ಭಪಾತ ಕುರಿತಂತೆ ಮಾಡಿದ ಆರೋಪವನ್ನು ಒಪ್ಪಿಕೊಂಡರೂ ಅದನ್ನು ಕ್ರೂರತೆ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿದೆ.