ವಾರಣಾಸಿ: ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿ ಪತ್ತೆಯಾದ ಶಿವಲಿಂಗದ ಬಗ್ಗೆ ‘ವೈಜ್ಞಾನಿಕ ತನಿಖೆ’ ನಡೆಸುವಂತೆ ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಾರಣಾಸಿ ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ.
ಜ್ಞಾನವ್ಯಾಪಿ ಮಸೀದಿ-ಶೃಂಗಾರ ಗೌರಿ ಪ್ರಕರಣದ ತೀರ್ಪನ್ನು ಸೆಪ್ಟೆಂಬರ್ 29 ರಂದು ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿತ್ತು. ವಾರಾಣಸಿಯ ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ ಅವರ ಪೀಠವು ಈ ಆದೇಶವನ್ನು ನೀಡಿದೆ.
ಮಸೀದಿಯ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅದರ ಕಾರ್ಬನ್ ಡೇಟಿಂಗ್ ಕೋರಿ ಹಿಂದೂ ಕಡೆಯವರು ಅರ್ಜಿಯನ್ನು ಸಲ್ಲಿಸಿದ್ದರು. ಇದನ್ನು ಮುಸ್ಲಿಂ ಕಡೆಯ ಅಂಜುಮನ್ ಇಸ್ಲಾಮಿಯಾ ಸಮಿತಿ ಮಾತ್ರವಲ್ಲದೇ ಹಿಂದೂ ಪಕ್ಷದ ವಾದಿ ನಂಬರ್ 1 ರಾಖಿ ಸಿಂಗ್ ಕೂಡ ವಿರೋಧಿಸಿದರು. ಕಾರ್ಬನ್ ಡೇಟಿಂಗ್ ರಚನೆಯನ್ನು ಹಾನಿಗೊಳಿಸುತ್ತದೆ ಎಂದು ವಕೀಲರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು.