ಕೊಚ್ಚಿ: ಇಂದು ಜಗತ್ತಿನಲ್ಲಿ ಕೇರಳದ ದಾದಿಯರು ಇಲ್ಲದ ದೇಶಗಳ ಪಟ್ಟಿ ಮಾಡುವುದು ಸುಲಭ; ಇರುವ ದೇಶಗಳ ಪಟ್ಟಿ ಬಹಳ ಉದ್ದ. ಕೇರಳದ ನರ್ಸ್ ಗಳು ಮೊದಲು ಬಹು ಸಂಖ್ಯೆಯಲ್ಲಿ ಹೋದುದು ಕುವೈತ್, ಕತಾರ್, ಸೌದಿ ಇತ್ಯಾದಿ ಕೊಲ್ಲಿ ದೇಶಗಳಿಗೆ.
ಅನಂತರ ಅವರು ಯೂರೋಪ್ ಜಯಿಸಿದರು; ಅಮೆರಿಕ ತಲುಪಿದರು. ಆಸ್ಟ್ರೇಲಿಯಾಕ್ಕೂ ಹೋದರು. ತೀರಾ ಕಡಿಮೆ ಪ್ರಮಾಣದಲ್ಲಿ ಪಶ್ಚಿಮ ಏಷ್ಯಾ ದೇಶಗಳಿಗೂ ಹೋಗಿದ್ದಾರೆ.
ಕೊಲ್ಲಿ ದೇಶಗಳಲ್ಲಿನ 40 ಲಕ್ಷದಷ್ಟು ಭಾರತೀಯ ವಲಸೆಗಾರರಲ್ಲಿ ಅರ್ಧಕ್ಕರ್ಧ ಮಂದಿ ಕೇರಳದವರು. ಅದರಲ್ಲಿ 16% ಮಹಿಳೆಯರು. ಕೆಲವೇ ವರ್ಷಗಳ ಹಿಂದೆ 9% ಇದ್ದ ಹೆಣ್ಣು ಮಕ್ಕಳ ಪ್ರಮಾಣವು ಪ್ರತಿ ವರ್ಷ ಹೆಚ್ಚಾಗುತ್ತಲೇ ಇದೆ. ಮುಖ್ಯವಾಗಿ ಕೇರಳದಿಂದ ಸಮುದ್ರೋಲ್ಲಂಘನೆ ಮಾಡಿದ ಮಹಿಳೆಯರಲ್ಲಿ ದಾದಿಯರ ಸಂಖ್ಯೆ ಹೆಚ್ಚು.
ದೇಶದ ಜನಸಂಖ್ಯೆಯಲ್ಲಿ ಕೇರಳದ ಪಾಲು 2.76; ಆದರೆ ದೇಶದ ನರ್ಸ್ ಗಳಲ್ಲಿ ಕೇರಳದ ನರ್ಸ್ ಗಳ ಪ್ರಮಾಣ 38.4. ವಿದೇಶಗಳಲ್ಲಿ ನಮಗೆ ಮೊದಲು ಕಾಣಿಸುವ ಭಾರತದ ನರ್ಸ್ ಗಳೆಂದರೆ ಕೇರಳದವರು.
ದೇಶದ ವೃತ್ತಿಪರರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳಿಗೆ ಹೋಗುತ್ತಿರುವವರೆಂದರೆ ಕೇರಳದ ನರ್ಸ್ ಗಳು.
ಇರಾಕಿನ ತಿಕ್ರಿತ್ ನಿಂದ ಪಾರಾಗಿ ಬಂದ ಕೇರಳದ ದಾದಿ ಸುನಿತಾ ಪ್ರಕಾರ, “ಸದ್ದುಗಳು ಮೊದಲು ದೂರದಿಂದ ಕೇಳಿಸಿದವು. ಅನಂತರ ಎದುರು, ಆ ಮೇಲೆ ಆಸ್ಪತ್ರೆಯ ಒಂದು ಭಾಗದ ಮೇಲೇ ಬಾಂಬು ದಾಳಿ ಆಯಿತು. ಹಾಗಾಗಿ ಈ ನರ್ಸ್ ಗಳ ವಿದೇಶಿ ಕನಸು ಹೂವಿನ ಹಾಸಿಗೆಯೇನಲ್ಲ. ಆದರೂ ಹೆಚ್ಚಿನವರು ಹೆಚ್ಚು ಸಂಪಾದನೆ, ಕೆಲಸದ ಖಚಿತತೆ ಮೇಲೆ ನಾವು ಹೋಗುವುದಾಗಿ ಹೇಳುತ್ತಾರೆ.
“ಪ್ರೊಬೆಷನರಿಯಲ್ಲಿ ವಿದೇಶಗಳಲ್ಲಿ ದುಡಿಯುವಾಗ ಸಂಬಳ ಬರದಿರುವುದು, ಅನಂತರ ಕೆಲಸ ಕಳೆದುಕೊಳ್ಳುವುದು, ಬೇರೆಡೆ ತೆರಳುವುದು ಇವೆಲ್ಲ ಅಲ್ಲೂ ಇದೆ. ಆದರೆ ಬದುಕಲು ನಾವು ಬೇರೆ ದೇಶಕ್ಕೆ ಹೋಗುತ್ತೇವೆ” ಎನ್ನುತ್ತಾರೆ ಕೇರಳದ ದಾದಿಯರು. ಇರಾಕ್, ಸಿರಿಯಾ, ಇಸ್ರೇಲ್ ಮೊದಲಾದ ಕಡೆ ಇಂತಹ ಅಪಾಯವಿದ್ದರೂ ಅವರು ಹಿಂದುಳಿದಿಲ್ಲ.
ಕೇರಳದ ನರ್ಸ್ ಗಳ ಲಂಡನ್ ಪ್ರಯಾಣ ಎಂದೋ ಆರಂಭವಾಗಿದ್ದರೂ ಅದು ಕೊಲ್ಲಿಯ ಬಳಿಕ ದೊಡ್ಡ ಪ್ರಮಾಣದಲ್ಲಿ ಆಯಿತು. ಇಡೀ ಯೂರೋಪಿನ ದೇಶಗಳಿಗೆ ವ್ಯಾಪಿಸಿದೆ.
1970ರಿಂದ ಹೆಚ್ಚಿನ ಸಂಖ್ಯೆಯ ಕ್ರಿಶ್ಚಿಯನ್ ದಾದಿಯರು ಕೊಲ್ಲಿ ಮತ್ತು ಯೂರೋಪುಗಳಿಗೆ ಹೋಗುತ್ತಿದ್ದಾರೆ. ಕೇರಳದ ಚರ್ಚ್ ಗಳು ಸಹ ದಾದಿಯರಿಗೆ ವಿದೇಶಗಳಲ್ಲಿ ಕೆಲಸ ಪಡೆಯಲು ನೆರವಾಗಿವೆ. ಇನ್ನು ಕೊಲ್ಲಿ ದೇಶಗಳಲ್ಲಿ 1970ರ ಬಳಿಕ ಆಧುನಿಕ ಸವಲತ್ತುಗಳು ಹೆಚ್ಚತೊಡಗಿದವಾದರೂ ತರಬೇತಿ ಪಡೆದ ನರ್ಸ್ ಮೊದಲಾದವರು ಇಲ್ಲವೇ ಇಲ್ಲ ಎಂಬ ಪರಿಸ್ಥಿತಿಯಲ್ಲಿ ಕೇರಳದ ದಾದಿಯರಿಗೆ ಮೊದಲ ಅಕ್ಷಯ ಪಾತ್ರೆಯಾಗಿ ತೆರದುಕೊಂಡಿತು.
ಇಟೆಲಿ, ಜರ್ಮನಿ, ಆಸ್ಟ್ರಿಯಾಗಳು ಮೊದಲು ಕೇರಳದ ನರ್ಸ್ ಗಳಿಗೆ ಹೆಚ್ಚಿನ ಮಣೆ ಹಾಕಿದವು. ಅಮೆರಿಕ ಸಂಯುಕ್ತ ಸಂಸ್ಥಾನವು ಮುಂದೆ ಭಾರತದ ನರ್ಸ್ ಗಳಲ್ಲಿ ಕೇರಳದ ನರ್ಸ್ ಗಳಿಗೆ ಮೊದಲ ಮಣೆ ಹಾಕಿತು.
ಇನ್ನು ಭಾರತದೊಳಗೇ ನೋಡಿದರೆ ಮುಂಬಯಿಯಂಥ ಮಹಾನಗರ ಬಿಡಿ ಉತ್ತರಾಖಂಡ, ಪಂಜಾಬ್, ಅಸ್ಸಾಂ ರಾಜ್ಯಗಳ ಸಣ್ಣ ಊರಿನ ಚಿಕಿತ್ಸಾಲಯಗಳಲ್ಲೂ ಕೇರಳದ ನರ್ಸ್ ಗಳನ್ನು ನೋಡಬಹುದು.