ಆಯುಧ ಪೂಜೆಯ ನೆಪದಲ್ಲಿ ಅಕ್ರಮ ಶಸ್ತ್ರಾಸ್ತ್ರ ಬಳಸಿದ ಸಂಘಪರಿವಾರದ ವಿರುದ್ಧ ಪೊಲೀಸ್ ಇಲಾಖೆ ಏಕೆ ಪ್ರಕರಣ ದಾಖಲಿಸಲಿಲ್ಲ: ಎಸ್ ಡಿಪಿಐ ಪ್ರಶ್ನೆ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಧಾರ್ಮಿಕ ಆಚರಣೆಯಾದ ವಿಜಯ ದಶಮಿಯ ಸಂದರ್ಭದಲ್ಲಿ ನಡೆಯುವ ಆಯುಧ ಪೂಜೆಯ ಸಂದರ್ಭ ಸಂಘಪರಿವಾರ ಅಕ್ರಮ ಶಸ್ತ್ರಾಸ್ತ್ರಗಳನ್ನು ಹಾಗೂ ಬಂದೂಕುಗಳನ್ನು ಪೂಜೆಯ ನೆಪದಲ್ಲಿ ಅದೂ ಹಲವಾರು ಅಪ್ರಾಪ್ತ ಬಾಲಕರ ಕೈಯಲ್ಲಿ ಪ್ರದರ್ಶಿಸುವ ಮೂಲಕ ಭಯದ ವಾತಾವರಣ ಸೃಷ್ಟಿಸಿದ್ದರೂ ಪೊಲೀಸ್ ಇಲಾಖೆ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ  ಪ್ರಶ್ನಿಸಿದ್ದಾರೆ.

- Advertisement -

 ಈ ಬಗ್ಗೆ SDPI  ಬಿಡುಗಡೆ ಮಾಡಿದ  ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ ಅವರು ವಿಜಯದಶಮಿ ಎಂಬುದು ಹಿಂದೂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದನ್ನು ಸಂಘಪರಿವಾರ ಹೈಜಾಕ್ ಮಾಡಿಕೊಂಡು ತಮಗೆ ಬೇಕಾದಂತೆ ನಡೆದುಕೊಂಡು ಕೋಮು ದ್ವೇಷವನ್ನು ಹಾಗೂ ಭಯವನ್ನು ಹುಟ್ಟಿಸುವ ರೀತಿಯಲ್ಲಿ ಖಡ್ಗ ಹಾಗೂ ಬಂದೂಕುಗಳನ್ನು ಹಿಡಿದುಕೊಂಡು ಸಾರ್ವಜನಿಕವಾಗಿ ಮೆರವಣಿಗೆ ಮಾಡುತ್ತಿದ್ದರೂ ಪೊಲೀಸ್ ಇಲಾಖೆ ಯಾಕೆ ಕುರುಡರಂತೆ ವರ್ತಿಸುತ್ತಿದೆ.ಇದಕ್ಕೆಲ್ಲಾ ಕಾನೂನಿನಲ್ಲಿ ಮಾನ್ಯತೆ ಇದೆಯಾ? ಎಂದು ಅವರು ಪ್ರಶ್ನಿಸಿದ್ದಾರೆ.

ಮುಸ್ಲಿಮರ ಮನೆಯಲ್ಲಿ ತರಕಾರಿ ಕತ್ತರಿಸುವ ಚಾಕು ಸಿಕ್ಕಿದರೂ ರೈಡ್ ಹೆಸರಲ್ಲಿ ರಾತ್ರೋರಾತ್ರಿ ದಾಳಿ ನಡೆಸಿ ಕಿರುಕುಳ ನೀಡಿ ಕಠಿಣ ಸೆಕ್ಷನ್ ಗಳನ್ನು ಹಾಕಿ ಬಂಧಿಸುವ ಪೋಲಿಸ್ ಇಲಾಖೆ, ಸಂಘಪರಿವಾರ ಬಹಿರಂಗವಾಗಿ ಅದು ಕೂಡ ಪೊಲೀಸರ ಸಮ್ಮುಖದಲ್ಲಿ ಅಪ್ರಾಪ್ತ ಬಾಲಕರ ಕೈಯಲ್ಲಿ ತಲ್ವಾರ್ ಕೊಟ್ಟು ದ್ವೇಷ ಬಿತ್ತುವ ಕಾರ್ಯ ನಡೆಸಿದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರ ಇಂತಹ ದ್ವಿಮುಖ ಹಾಗೂ ತಾರತಮ್ಯ ನೀತಿಯಿಂದ ದಿನ ಕಳೆದಂತೆ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆ ಹಾಗೂ ನ್ಯಾಯದ ಭರವಸೆ ಕ್ಷೀಣಿಸುತ್ತಿದೆ. ಮುಂದಿನ ದಿನಗಳಲ್ಲಿ ಜನರು ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಸಂಘಪರಿವಾರದ ದಾಟಿಯಲ್ಲೇ ಪ್ರತಿಕ್ರಿಯೆ ನೀಡುತ್ತಾ ಹೋದರೆ ಈ ದೇಶದ ಪರಿಸ್ಥಿತಿ  ಎಲ್ಲಿಗೆ ಬಂದು ನಿಲ್ಲಬಹುದು ಎಂದು ಎಚ್ಚರಿಸಿದರು.

- Advertisement -

ಹಾಗಾಗಿ ದ.ಕ ಜಿಲ್ಲಾ ಪೊಲೀಸರು ಆಯುಧ ಪೂಜೆಯ ಹೆಸರಲ್ಲಿ ಅಕ್ರಮ ಶಸ್ತ್ರಾಸ್ತ್ರ ಗಳ ಪ್ರದರ್ಶಿಸಿ ಭಯದ ವಾತಾವರಣ ನಿರ್ಮಿಸಲು ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.



Join Whatsapp