ಲೆಜೆಂಡ್ಸ್ ಲೀಗ್-2022| ಚಾಂಪಿಯನ್‌ ಪಟ್ಟಕ್ಕೇರಿದ ಇಂಡಿಯಾ ಕ್ಯಾಪಿಟಲ್ಸ್​

Prasthutha|

ಜೈಪುರ: ʻಲೆಜೆಂಡ್ಸ್ ಲೀಗ್-2022ʼ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಗೌತಮ್ ಗಂಭೀರ್ ಸಾರಥ್ಯದ ಇಂಡಿಯಾ ಕ್ಯಾಪಿಟಲ್ಸ್, ಭಿಲ್ವಾರಾ ಕಿಂಗ್ಸ್ ತಂಡವನ್ನು 104 ರನ್​ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಲೆಜೆಂಡ್ಸ್​ ಲೀಗ್ ಕ್ರಿಕೆಟ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

- Advertisement -

ಭಿಲ್ವಾರಾ ಕಿಂಗ್ಸ್ ಬಿಗು ಬೌಲಿಂಗ್‌ ದಾಳಿಗೆ ಆರಂಭದಲ್ಲಿ ಪತರಗುಟ್ಟಿದ್ದ ಕ್ಯಾಪಿಟಲ್ಸ್‌, 9 ರನ್‌ಗಳಿಸುವಷ್ಟರಲ್ಲೇ 3 ವಿಕೆಟ್‌ ಕಳೆದುಕೊಂಡಿತ್ತು. 24 ರನ್‌ ತಲುಪುವಷ್ಟರಲ್ಲಿ 4ನೇ ವಿಕೆಟ್‌ ಕೂಟ ಪತನವಾಗಿತ್ತು. ಆದರೆ ಆ ಬಳಿಕ ಒಂದಾದ ನ್ಯೂಜಿಲ್ಯಾಂಡ್​​​​​​ನ ಮಾಜಿ ನಾಯಕ ರಾಸ್ ಟೇಲರ್ ಅಮೋಘ ಅರ್ಧಶತಕ (82 ರನ್, 41 ಎಸೆತ,4×4, 6×8 ) ಮತ್ತು  ಆಸೀಸ್ ಅನುಭವಿ ವೇಗಿ ಮಿಚೆಲ್ ಜಾನ್ಸನ್ 32 ಎಸೆತಗಳಲ್ಲಿ 62 ರನ್‌ಗಳಿಸಿ ಕ್ಯಾಪಿಟಲ್ಸ್‌ ತಂಡವು 7 ವಿಕೆಟ್‌ ನಷ್ಟದಲ್ಲಿ 211 ರನ್‌ಗಳಿಸಲು ನೆರವಾಗಿದ್ದರು.  

ರಾಹುಲ್ ಶರ್ಮಾ 30ರನ್‌ ನೀಡಿ 4 ವಿಕೆಟ್‌ ಪಡೆದರೆ, ಮಾಂಟಿ ಪನೇಸರ್ 3 ಓವರ್ಗಳ ದಾಳಿಯಲ್ಲಿ 13 ರನ್‌ ನೀಡಿ 3 ವಿಕೆಟ್‌ ಪಡೆದರು.

- Advertisement -

212 ರನ್‌ಗಳ  ಕಠಿಣ ಗುರಿಯನ್ನು ಬೆನ್ನಟ್ಟಲು ಬ್ಯಾಟಿಂಗ್‌ಗೆ ಇಳಿದ  ಇರ್ಫಾನ್ ಪಠಾಣ್ ಸಾರಥ್ಯದ ಭಿಲ್ವಾರಾ ಕಿಂಗ್ಸ್, ಯಾವುದೇ ಹಂತದಲ್ಲೂ ಗೆಲುವಿಗಾಗಿ ಹೋರಾಡಲಿಲ್ಲ. 7 ಮಂದಿ ಬ್ಯಾಟರ್‌ಗಳು ಎರಡಂಕಿಯ ಮೊತ್ತವನ್ನೇ ತಲುಪಲಿಲ್ಲ. 27 ರನ್‌ಗಳಿಸಿದ ಶೇನ್‌ ವಾಟ್ಸನ್‌ ಅವರದ್ದೇ ಟಾಪ್‌ ಸ್ಕೋರ್.‌  ಜೇಸಲ್‌ ಕರಿಯಾ 22 ರನ್‌, ಯೂಸುಫ್ ಪಠಾಣ್ 6 ರನ್‌,  ನಾಯಕ ಇರ್ಫಾನ್‌ ಕೇವಲ 2 ರನ್‌ಗಳಿಸಿ ನಿರ್ಗಮಿಸಿದರು. ಅಂತಿಮವಾಗಿ 18.2 ಓವರ್‌ಗಳಲ್ಲಿ ಕಿಂಗ್ಸ್‌, 107ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿತು.

ಕ್ಯಾಪಿಟಲ್ಸ್ ಪರ ಪವನ್ ಸುಯಲ್ (2/27), ಪಂಕಜ್ ಸಿಂಗ್ (2/14) ಮತ್ತು ಪ್ರವೀಣ್ ತಾಂಬೆ (2/19) ತಲಾ ಎರಡು ವಿಕೆಟ್ ಪಡೆದರು.

ಭಾನುವಾರ ನಡೆದಿದ್ದ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಉಭಯ ತಂಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ 4 ವಿಕೆಟ್‌ ಅಂತರದಲ್ಲಿ ಗೆದ್ದು, ಮೊದಲ ತಂಡವಾಗಿ ಫೈನಲ್‌ ಪ್ರವೇಶಿಸಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಭಿಲ್ವಾರಾ ಕಿಂಗ್ಸ್, 5 ವಿಕೆಟ್‌ ನಷ್ಟದಲ್ಲಿ 226 ರನ್‌ ಗಳಿಸಿತ್ತು. ಕಠಿಣ ಗುರಿ ಚೇಸ್‌ ಮಾಡಿದ ಕ್ಯಾಪಿಟಲ್ಸ್‌, ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು.



Join Whatsapp