ಕೋಲಾರ: ಪರಿಶಿಷ್ಟರ ಮನೆಯ ಮುಂದೆ ದೇವರ ಮೂರ್ತಿ ಉತ್ಸವವನ್ನು ಮೆರವಣಿಗೆಯ ಮೂಲಕ ಆಚರಿಸಲಾಯಿತು ಎನ್ನುವ ಕಾರಣಕ್ಕೆ ಸವರ್ಣೀಯರು ಪರಿಶಿಷ್ಟರ ಮೇಲೆ ಎರಗಿರುವ ಘಟನೆ ಕೋಲಾರದ ಬೆಳಮಾರನಹಳ್ಳಿ ಪಂಚಾಯಿತಿ ವ್ಯಾಪ್ತಿಯ ದಾನವಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೇವರ ಮೆರವಣಿಗೆಯು ಪರಿಶಿಷ್ಟರ ನಿವಾಸದ ಮುಂದೆ ಸಾಗುತ್ತಿರುವಾಗ ‘ ಈ ಹಿಂದೆ ಹೇಗೆ ನಡೆಯುತ್ತಿತ್ತು ಅದೇ ಪದ್ಧತಿಯಂತೆಯೇ ಉತ್ಸವ ನಡೆಯಲಿ’ ಎಂದು ಸವರ್ಣೀಯರು ಹೇಳಿದ್ದಾರೆ. ‘ನಮ್ಮವರ ಮನೆ ಬಳಿ ಕೊನೆಯದಾಗಿ ತಂದು ತರಾತುರಿಯಲ್ಲಿ ಏಕೆ ಮೂರ್ತಿಯನ್ನು ಕೊಂಡೊಯ್ಯುತ್ತೀರಿ, ಎಂದು ಪರಿಶಿಷ್ಟ ಯುವಕರು ಪ್ರಶ್ನಿಸಿದಾಗ ಪರಸ್ಪರ ಘರ್ಷಣೆ ಸಂಭವಿಸಿದೆ.
ಅಲ್ಲಿದ್ದ ಪೊಲೀಸರ ಎದುರಲ್ಲೇ ಮಾತಿನ ಚಕಮಕಿ ಸಂಭವಿಸಿ , ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪರಿಶಿಷ್ಟರು ಹಾಗೂ ಸವರ್ಣೀಯರು ಕಲ್ಲು, ದೊಣ್ಣೆ, ಇಟ್ಟಿಗೆಯಿಂದ ಹೊಡೆದಾಡಿಕೊಂಡಿದ್ದಾರೆ. ಎರಡೂ ಗುಂಪಿನ ಹಲವರಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ 9 ಮಂದಿ ಸರ್ವರ್ಣೀಯರ ಮೇಲೆ ದೌರ್ಜನ್ಯ ಪ್ರಕರಣ ಹಾಗೂ 11 ಮಂದಿ ಪರಿಶಿಷ್ಟರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಆ ಬಳಿಕ ಪರಸ್ಪರ ಶಾಂತಿಯ ಸಭೆಯ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಹಾಗೂ ತಹಶೀಲ್ದಾರ್ ವಿ.ನಾಗರಾಜ್ ನೇತೃತ್ವದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಯಿತು.