ನವದೆಹಲಿ: ಅಕ್ಟೋಬರ್ 16ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಟೀಮ್ ಇಂಡಿಯಾ ಗುರುವಾರ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದೆ. ವಿಮಾನ ಹತ್ತುವ ಮೊದಲು ಭಾರತ ತಂಡದ ಆಟಗಾರರು, ಕೋಚ್ ಹಾಗೂ ಸಹಾಯಕ ಸಿಬ್ಬಂದಿ ಕಪ್ಪು ಸೂಟ್ ತೊಟ್ಟು ಫೋಟೋಗೆ ಫೋಸ್ ನೀಡಿದ್ದಾರೆ. ʻಪರಿಪೂರ್ಣ ಚಿತ್ರ, ಸಾಧಿಸಿ ಬನ್ನಿ ಟೀಂ ಇಂಡಿಯಾ, ವಿಶ್ವಕಪ್‌ಗೆ ಬರುತ್ತಿದ್ದೇವೆʼ ಎಂಬ ಕ್ಯಾಪ್ಶನ್‌ನೊಂದಿಗೆ ಈ ಚಿತ್ರವನ್ನು ಬಿಸಿಸಿಐ, ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಸೇರಿದಂತೆ ಕೆಲ ಆಟಗಾರರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ಸೂಟ್‌ನಲ್ಲಿ ಮಿಂಚುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಏಷ್ಯಾ ಕಪ್‌ನಲ್ಲಿ ಮುಗ್ಗರಿಸಿದ ಬಳಿಕ ತಾಯ್ನೆಲದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧದ ಟಿ20 ಸರಣಿಯಲ್ಲಿ ಜಯಭೇರಿ ಬಾರಿಸುವ ಮೂಲಕ ರೋಹಿತ್ ಶರ್ಮಾ ಬಳಗ, ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ ಬೌಲಿಂಗ್ ವಿಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗದೆ ಟೀಮ್ ಇಂಡಿಯಾ ಕಾಂಗೂರು ನಾಡಿಗೆ ಹಾರಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಬೌಲರ್ಗಳ ವೈಫಲ್ಯ ಮುಂದುವರಿದಿತ್ತು.
ಪ್ರಮುಖರ ಗೈರು
ಇಬ್ಬರು ಪ್ರಮುಖ ಆಟಗಾರರ ಅಭಾವವನ್ನು ಭಾರತ, ಯಾವ ರೀತಿಯಲ್ಲಿ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಬೆನ್ನುಮೂಳೆ ಮುರಿತಕ್ಕೆ ಒಳಗಾಗಿರುವ ಪ್ರಮುಖ ಬೌಲರ್ ಜಸ್‌ಪ್ರೀತ್ ಬುಮ್ರಾ ಮತ್ತು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ವಿಶ್ವಕಪ್ನಿಂದ ಹೊರನಡೆದಿದ್ದಾರೆ. ಟೂರ್ನಿ ಆರಂಭಕ್ಕೂ ಮೊದಲೇ ತಂಡಕ್ಕೆ ಇದು ಹಿನ್ನಡೆ ಉಂಟುಮಾಡಿದೆ.
ಬುಮ್ರಾ ಬದಲಿ ಆಟಗಾರನನ್ನು ಬಿಸಿಸಿಐ ಇದುವರೆಗೂ ಹೆಸರಿಸಿಲ್ಲ. ಆದರೆ ಮೀಸಲು ಆಟಗಾರರ ಪಟ್ಟಿಯಲ್ಲಿರುವ ವೇಗಿಗಳಾದ ಮೊಹಮ್ಮದ್ ಶಮಿ ಅಥವಾ ದೀಪಕ್ ಚಹರ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಕೋಚ್ ರಾಹುಲ್ ದ್ರಾವಿಡ್, ಶಮಿ ಆಯ್ಕೆಯ ಸುಳಿವು ನೀಡಿದ್ದಾರೆ.
ಎರಡು ಅಭ್ಯಾಸ ಪಂದ್ಯ
ಅಕ್ಟೋಬರ್ 23ರಂದು ಮೆಲ್ಬೋರ್ನ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವಾಡುವ ಮೂಲಕ ಭಾರತ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮೊದಲು ಆತಿಥೇಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳು ಅಕ್ಟೋಬರ್ 17 ಮತ್ತು 19 ರಂದು ನಡೆಯಲಿದೆ.