ರಾಜಕಾರಣಿಗಳ ಮೇಲೆ 2014ರಿಂದ ನಾಲ್ಕು ಪಟ್ಟು ಹೆಚ್ಚಾದ ಇಡಿ ದಾಳಿ; 95% ಪ್ರತಿಪಕ್ಷದವರೇ ಗುರಿ

Prasthutha|

ನವದೆಹಲಿ:  ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಜು.3ರಂದು ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆದಾಗ ವಿರೋಧ ಪಕ್ಷಗಳ ಸದಸ್ಯರು ಮೊಳಗಿಸಿದ ಕೂಗು ಇಡಿ, ಇಡಿ ಎಂಬುದಾಗಿತ್ತು. ಆ ಘೋಷಣೆಗೆ ಕಾರಣ ಶಿವಸೇನೆಯ ಏಕನಾಥ ಶಿಂಧೆ ಗುಂಪು ಬಿಜೆಪಿ ಜೊತೆ ಸೇರಲು ಇಡಿ- ಜಾರಿ ನಿರ್ದೇಶನಾಲಯದ ದಾಳಿಯ ಬೆದರಿಕೆಯಾಗಿತ್ತು ಎನ್ನಲಾಗಿದೆ.

- Advertisement -

ಸಿಬಿಐ ತನಿಖೆಗಳು ತುಂಬ ನಿಧಾನವಾಗಿ ಸಾಗಿರುವುದರಿಂದ ಕೇಂದ್ರ ಸರಕಾರವು ಪಶ್ಚಿಮ ಬಂಗಾಳದ ಟಿಎಂಸಿ ನಾಯಕರ ವಿರುದ್ಧ ಇಡಿ ಅಧಿಕಾರಿಗಳನ್ನು ಕಳುಹಿಸಿದೆ ಎಂದು ಆಗಸ್ಟ್ 21ರಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. 

ಇಡಿ ಈಗ ಹೊಸ ಸಿಬಿಐ ಆಗಿ ಅವತಾರವೆತ್ತಿದ್ದು ಎರಡು ರಾಜ್ಯಗಳಲ್ಲಿ ಅದರ ಕೆಲಸ ಏನು ಎಂಬುದನ್ನು ಮೇಲಿನ ಎರಡು ಘಟನೆಗಳು ಹೇಳುತ್ತವೆ. ಕೇಂದ್ರೀಯ ಏಜೆನ್ಸಿಗಳು ಈಗಂತೂ ವಿರೋಧ ಪಕ್ಷಗಳ ಮೇಲೆ ದಾಳಿ ಮಾಡುವುದೇ ತಮ್ಮ ಕೆಲಸ ಎಂದು ಭಾವಿಸಿದಂತಿದೆ.

- Advertisement -

ಕಳೆದ 18 ವರ್ಷಗಳಿಂದ ಇ.ಡಿ. ದಾಳಿಗೆ ಒಳಗಾದ ರಾಜಕಾರಣಿಗಳ ಸಂಖ್ಯೆ 147, ಅವರಲ್ಲಿ 85% ವಿರೋಧ ಪಕ್ಷದವರು ಎನ್ನುವುದು ನ್ಯಾಯಾಲಯದ ದಾಖಲೆಗಳು, ತನಿಖಾ ಸಂಸ್ಥೆಗಳ ವರದಿ ಮತ್ತು ಹೇಳಿಕೆಗಳು, ಎಫ್ ಐಆರ್ ದಾಖಲಾದ ರಾಜಕಾರಣಿಗಳು, ಬಂಧಿಸಲ್ಪಟ್ಟವರು ಇತ್ಯಾದಿ ದಾಖಲೆಗಳಿಂದ ತಿಳಿದು ಬರುತ್ತದೆ. 

ಕಳೆದ  18 ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು, ಸಿಬಿಐ ದಾಳಿ ಮಾಡಿದ, ಮೊಕದ್ದಮೆ ದಾಖಲಿಸಿದ, ಬಂಧಿಸಿದ 200 ರಾಜಕಾರಣಿಗಳ ಅಂದರೆ 80% ಮೊಕದ್ದಮೆಗಳನ್ನು ರದ್ದು ಮಾಡಿರುವ ಘಟನೆಗಳೂ ನಡೆದಿವೆ.

ಹೋಲಿಕೆಗಳು ಅಲ್ಲಿಗೇ ಮುಗಿಯುವುದಿಲ್ಲ.

2014ರಲ್ಲಿ ಬಿಜೆಪಿ ಮೈತ್ರಿ ಸರಕಾರ ಬಂದ ಮೇಲೆ ವಿರೋಧ ಪಕ್ಷಗಳ ರಾಜಕಾರಣಿಗಳ ಅವರ ಸಂಬಂಧಿಕರ ಮೇಲೆ ಜಾರಿ ನಿರ್ದೇಶನಾಲಯದ ದಾಳಿಗಳು ತುಂಬ ಹೆಚ್ಚಾಗಿವೆ. ಅಂದಿನಿಂದ 121 ರಾಜಕಾರಣಿಗಳು ಇ.ಡಿ. ಕೊಕ್ಕೆಗೆ ಎಂದರೆ ದಾಳಿಗೆ, ಬಂಧನಕ್ಕೆ, ವಿಚಾರಣೆಗೆ ಸಿಲುಕಿದ್ದಾರೆ. ಅವರಲ್ಲಿ 115 ಎಂದರೆ 95% ಶೇಕಡಾ ಪ್ರತಿಪಕ್ಷಗಳಿಗೆ ಸೇರಿದವರಾಗಿದ್ದಾರೆ. ಇಡಿ ಸಿಬ್ಬಂದಿ ಬಲ ಸಿಬಿಐನ ಮೂರನೇ ಒಂದು ಭಾಗ ಇದ್ದರೂ ಇಷ್ಟೊಂದು ದಾಳಿ ಆಶ್ಚರ್ಯಕರವೇ ಆಗಿದೆ.

2004 -2014ರ ನಡುವೆ ಕಾಂಗ್ರೆಸ್ ಮೈತ್ರಿ ಸರಕಾರ ಇದ್ದಾಗ ಈ ತನಿಖಾ ಸಂಸ್ಥೆಗಳಿಂದ ಬರೇ 26 ರಾಜಕಾರಣಿಗಳ ಮೇಲೆ ದಾಳಿ ನಡೆದಿತ್ತು. ಇವರಲ್ಲಿ 14 ಮಂದಿ ವಿರೋಧ ಪಕ್ಷಗಳವರು ಎಂದರೆ 54 ಶೇಕಡಾ ಮಾತ್ರ.

ಜಾರಿ ನಿರ್ದೇಶನಾಲಯದವರ ದಾಳಿ ಮತ್ತು ಬಂಧನವು ಮುಖ್ಯವಾಗಿ 2005ರಲ್ಲಿ ಜಾರಿಗೊಂಡ ಪಿಎಂಎಲ್ ಎ- ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ನಡೆದಿದೆ. ಇದರಲ್ಲಿ ಜಾಮೀನು ಪಡೆಯಲು ಕಠಿಣ ನಿಯಮಗಳಿವೆ. ಆದರೆ ಈ ಕಾಯ್ದೆಯಡಿ ಆರೋಪಿಯ ಬಂಧನ, ಆಸ್ತಿ ಮುಟ್ಟುಗೋಲು ಇತ್ಯಾದಿಗೆ ವಿಫುಲ ಅವಕಾಶವಿದೆ. ಈ ಬಗ್ಗೆ ದಾಳಿ ಅಧಿಕಾರಿಯೇ ಕೋರ್ಟಿಗೆ ಹೇಳಿಕೆ ನೀಡುತ್ತಾರೆ.

ವಿರೋಧ ಪಕ್ಷಗಳು ಇತ್ತೀಚಿನ ಮುಂಗಾರು ಅಧಿವೇಶನದ ಸಹಿತ ಸಂಸತ್ ಅಧಿವೇಶನಗಳಲ್ಲಿ ಇಡಿ ದುರ್ಬಳಕೆಯ ಬಗ್ಗೆ ಸತತ ಧ್ವನಿ ಎತ್ತಿವೆ.  ಆದರೆ ಅದನ್ನು ಸರಕಾರವು ನಿರಾಕರಿಸಿ, ಇಡಿ ದಾಳಿಗಳು ರಾಜಕೀಯ ಪ್ರೇರಿತ ಅಲ್ಲ; ಅವೆಲ್ಲ ಪೊಳ್ಳು ಆರೋಪ ಎಂದು ನಿರಾಕರಿಸುತ್ತ ಬಂದಿವೆ. ರಾಜ್ಯ ತನಿಖಾ ಸಂಸ್ಥೆಗಳು ಇಲ್ಲವೇ ಪೊಲೀಸರಿಂದ ಮೊದಲು ಮೊಕದ್ದಮೆ ಹೂಡಲಾದವುಗಳೇ ಹೆಚ್ಚು ಎಂದು ಆಳುವ ಪಕ್ಷ ಉತ್ತರಿಸಿತ್ತು.

ಆದರೆ ಇಡಿ ದಾಳಿಗೊಳಗಾದ ರಾಜಕೀಯ ಪಕ್ಷಗಳವರ ಅಂಕಿ ಸಂಖ್ಯೆಯು ಇದರ ಹಿಂದಿನ ಹುನ್ನಾರ ಮತ್ತು ಛೂ ಬಿಡುವಿಕೆಗಳನ್ನು ಗುರುತಿಸಲು ಸಹಕಾರಿಯಾಗಿದೆ.

ವಿಶ್ಲೇಷಣೆಯು ಹೇಳುವ ಸತ್ಯ ವಿಚಾರ

2014ರಿಂದ ಜಾರಿ ನಿರ್ದೇಶನಾಲಯಿಂದ ದಾಳಿಗೊಳಗಾದ ರಾಜಕೀಯ ಪಕ್ಷಗಳವರ ಲೆಕ್ಕಾಚಾರವು ಮುಂದಿನಂತಿದೆ.

ಕಾಂಗ್ರೆಸ್ -24, ಟಿಎಂಸಿ- 19, ಎನ್ ಸಿಪಿ- 11, ಶಿವಸೇನೆ- 8, ಡಿಎಂಕೆ- 6, ಬಿಜೆಡಿ- 6, ಆರ್ ಜೆಡಿ- 5, ಬಿಎಸ್ ಪಿ- 5, ಎಸ್ ಪಿ- 5, ಟಿಡಿಪಿ- 5, ಎಎಪಿ- 3, ಐಎನ್ಎಲ್ ಡಿ- 4, ವೈಎಸ್ಆರ್ ಸಿಪಿ- 3, ಸಿಪಿಎಂ- 2, ಎನ್ ಸಿ- 2, ಪಿಡಿಪಿ- 2, ಇಂಡ್ – 2, ಎಐಡಿಎಂಕೆ- 1, ಎಂಎನ್ ಎಸ್ – 1, ಎಸ್ ಬಿಎಸ್ ಪಿ- 1, ಟಿಆರ್ ಎಸ್- 1. ಇತ್ತೀಚೆಗೆ ಮತ್ತೊಂದು ಎಎಪಿ.

ಯುಪಿಎ ಸರಕಾರವು ಎಸ್ ಪಿ ಮತ್ತು ಬಿಎಸ್ ಪಿ ಮೇಲೆ ಸಿಬಿಐ ಬಳಸಿತ್ತು ಎಂಬ ಆರೋಪವಿದ್ದು, ಅವರ ಬೆಂಬಲ ದೊರೆತ ಮೇಲೆ ಅವರ ಮೇಲೆ ಕಣ್ಣಿಡುವುದನ್ನು ಬಿಟ್ಟಿತು ಎನ್ನಲಾಗಿದೆ. ಎನ್ ಡಿಎ ಎರಡನೆಯ ಅವಧಿಯಲ್ಲಿ ವಿರೋಧ  ಪಕ್ಷಗಳನ್ನು ಗುರಿಯಿಟ್ಟೇ ಇಡಿ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ.

ಕಾಂಗ್ರೆಸ್ ಜೊತೆ ಇದ್ದಾಗ ಈಗಿನ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮೇಲೆ 2014- 15ರಲ್ಲಿ ಶಾರದಾ ಚಿಟ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ ಮುಗಿ ಬಿದ್ದಿದ್ದವು. 2014ರಲ್ಲಿ ಅವರ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿ ದಿನಗಟ್ಟಲೆ ವಿಚಾರಣೆ ನಡೆಸಿದ್ದವು. ಆದರೆ ಅವರು ಬಿಜೆಪಿ ಸೇರಿದ ಮೇಲೆ ಅವರ ಮೇಲಿನ ಮೊಕದ್ದಮೆಗಳು ಏನಾದವು ಎಂಬುದಕ್ಕೆ ಉಸಿರೆತ್ತುವವರೇ ಇಲ್ಲ.

ಹಾಗೆಯೇ ಆಗ ತೃಣಮೂಲ ಕಾಂಗ್ರೆಸ್ಸಿನಲ್ಲಿದ್ದ ಸುವೇಂಧು ಅಧಿಕಾರಿ ಮತ್ತು ಮುಕುಲ್ ರಾಯ್ ಮೇಲೆ ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ಮುಗಿ ಬಿದ್ದಿದ್ದವು. ಕಳೆದ ಪಶ್ಚಿಮ ಬಂಗಾಳ ಚುನಾವಣೆಗೆ ಮೊದಲು ಸುವೇಂಧು ಅಧಿಕಾರಿ ಮತ್ತು ರಾಯ್ ಬಿಜೆಪಿ ಸೇರಿದ್ದರು. ಅನಂತರ ಅವರ ಮೇಲಿನ ಮೊಕದ್ದಮೆ ಗೊರಕೆ ಹೊಡೆಯುತ್ತಿದೆ. ಇಡಿ- ಜಾರಿ ನಿರ್ದೇಶನಾಲಯವು ಆಗ ನಾಲ್ವರು ಟಿಎಂಸಿ ನಾಯಕರ ಮೇಲೆ ಇತರರ ಜೊತೆಗೆ ಚಾರ್ಜ್ ಶೀಟ್ ಸಲ್ಲಿಸಿತ್ತು.  ಆದರೆ ಯಾವುದೇ ಸಾಕ್ಷ್ಯಾಧಾರ ಹೊಂದಿಸಿ ಕೊಡಲು ಇನ್ನೂ ಸಾಧ್ಯವಾಗಿಲ್ಲ. ಈಗ ಮುಕುಲ್ ರಾಯ್ ಮತ್ತೆ ಟಿಎಂಸಿಗೆ ವಾಪಸಾಗಿದ್ದಾರೆ.

2019ರಲ್ಲಿ ಮೊದಲ ಬಾರಿಗೆ ಇಡಿಯು ಟಿಡಿಪಿ ಸಂಸದ ವೈ. ಎಸ್. ಚೌಧರಿ ಮನೆ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ತಿಂಗಳ ಬಳಿಕ ಚೌಧರಿ ಬಿಜೆಪಿ ಸೇರಿದರು. ಇ.ಡಿ. ಏನೋ ಚಾರ್ಜ್ ಶೀಟ್ ಸಲ್ಲಿಸಿದಂತೆ ಮಾಡಿದೆ.

ಇಡಿಯು ನೆಹರೂ ಕುಟುಂಬದ ಮೇಲೆಯೂ ಮೊಕದ್ದಮೆಗಳನ್ನು ಹೆಣೆಯುತ್ತಿದೆ ಎನ್ನಲಾಗಿದೆ. ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ದೂರಿನ ಮೇಲೆ ಕಾಂಗ್ರೆಸ್ ನ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನು ನ್ಯಾಶನಲ್ ಹೆರಾಲ್ಡ್ ಮೊಕದ್ದಮೆಯಡಿ ಇಡಿ ವಿಚಾರಿಸುತ್ತಲೇ ಇದೆ. ಇಡಿ ಅದಕ್ಕೆ ಮೊದಲು ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾರ ಕಂಪೆನಿ ಮೇಲೆ ದಾಳಿ ನಡೆಸಿ ಅವರನ್ನು ಹಲವಾರು ಬಾರಿ ಅಕ್ರಮ ಹಣ ವರ್ಗಾವಣೆ ಎಂದು ವಿಚಾರಣೆಗೆ ಕರೆಸಿಕೊಂಡಿದೆ. 

ಏರ್ಸೆಲ್ ಮ್ಯಾಕ್ಸಿಸ್ ಮೊಕದ್ದಮೆಯಲ್ಲಿ ಮಾಜಿ ಕೇಂದ್ರ ಮಂತ್ರಿ ಪಿ. ಚಿದಂಬರಂ ಮತ್ತು ಅವರ ಮಗ ಕಾರ್ತಿ ಮೇಲೆ ಇಡಿ ಹರಿ ಹಾಯ್ದಿದೆ. ಇದರ ತನಿಖೆಯ ಜೊತೆಗೆ ಚಿದಂಬರಂ ಮತ್ತು ಮಗನ ಮೇಲೆ ಐಎನ್ ಎಕ್ಸ್ ಮೀಡಿಯಾ ಮತ್ತು ವೀಸಾಕ್ಕಾಗಿ ಲಂಚ ಮೊಕದ್ದಮೆಗಳನ್ನೂ ಇಡಿ ಹೂಡಿದೆ.

ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿ ಎಂದು ಇಡಿ ಹಿರಿಯ ರಾಜಕಾರಣಿಗಳ ಕುಟುಂಬದವರ ಮೇಲೂ ಕ್ರಮ ಕೈಗೊಳ್ಳುವುದಾಗಿ ಹೊರಟಿದೆ.

ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಕಮಲನಾಥ್, ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ನೆಹರೂ ಕುಟುಂಬದ ಆರಕ್ಕೂ ಹೆಚ್ಚು ಸಂಬಂಧಿಕರ ಮೇಲೆ ಬಿಜೆಪಿಯ ಎರಡನೆಯ ಅವಧಿಯಲ್ಲಿ ಇಡಿ ಪ್ರಕರಣ ದಾಖಲಿಸಿದೆ. ಕೇರಳದ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಅವರ ಮಗನನ್ನು ಇಡಿ ತನಿಖೆಗೊಳಪಡಿಸಿದೆ. ಇತ್ತೀಚೆಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡ ಬಿಜೆಪಿ ಸೇರಿದರು.

2020ರ ಜುಲೈಯಲ್ಲಿ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಮತ್ತು ಕೆಲವು ಶಾಸಕರು ಬಂಡಾಯವೆದ್ದರು. ಆಗ ಸರಿಯಾಗಿ 2007- 2009ರಲ್ಲಿ ರಸಗೊಬ್ಬರ ಸ್ಥಳ ತಿರುಗಿಸಿದ ಮೊಕದ್ದಮೆ ಎಂದ ಗೆಹ್ಲೋಟ್ ರ ಸಹೋದರ ಅಗ್ರಸೇನ್ ಮನೆ, ಕಚೇರಿಗಳ ಮೇಲೆ ದಾಳಿ ನಡೆಯಿತು.

ಇದೇ ವೇಳೆ ಬಿಜೆಪಿ ನಾಯಕ ಸುಧಾಂಶು ಮಿಟ್ಟಲ್ ಅವರ ಬಾವ ಲಲಿತ್ ಗೋಯೆಲ್ ಮೇಲೆ ಹೂಡಿಕೆದಾರರು ಮತ್ತು ಮನೆ ಕೊಳ್ಳುವವರಿಗೆ ಮೋಸ ಮಾಡಿದರು ಎಂದು ಅವರ ಐರಿಯೋ ಗುಂಪಿನ ಮೇಲೆ ಇಡಿ ದಾಳಿ ನಡೆಸಿತ್ತು.

ಎನ್ ಡಿಎ ಎರಡನೆಯ ಅವಧಿಯಲ್ಲಿ ಇಡಿ ತನಿಖೆಗೆ ಸಿಕ್ಕಿರುವ ಇತರ ರಾಜಕಾರಣಿಗಳು ಎಂದರೆ ಕರ್ನಾಟಕದ ಡಿ. ಕೆ. ಶಿವಕುಮಾರ್, ಹರಿಯಾಣದ ಹಿಂದಿನ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ, ದಿವಂಗತ ರಾಜ್ಯ ಸಭಾ ಸದಸ್ಯ ಸೋನಿಯಾರ ಬೆಂಬಲಿಗರಾಗಿದ್ದ ಅಹ್ಮದ್ ಪಟೇಲ್. 

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಸಹಿತ ಟಿಎಂಸಿಯ ಒಂದು ಡಜನ್ ನಾಯಕರೂ ಈ ಪಟ್ಟಿಯಲ್ಲಿ ಇದ್ದಾರೆ. ಎನ್ ಸಿಪಿ ನಾಯಕರಾದ ಶರದ್ ಪವಾರ್, ಅಜಿತ್ ಪವಾರ್, ಅನಿಲ್ ದೇಶಮುಖ್, ನವಾಬ್ ಮಲಿಕ್, ಪ್ರಫುಲ್ ಪಟೇಲ್, ಶಿವಸೇನೆಯ ನಾಯಕರಾದ ಸಂಜಯ್ ರಾವುತ್, ಅನಿಲ್ ಪರಬ್, ಹಾಗೂ ಬಿಹಾರದ ಮಾಜೀ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವರ ಕುಟುಂಬವನ್ನೂ ಒಳಗೊಂಡಿದೆ.

ಬಿಜೆಪಿ ನಾಯಕರಾದ ಕರ್ನಾಟಕದ ಗಣಿ ಅಕ್ರಮದ ಗಾಲಿ ಜನಾರ್ದನ ರೆಡ್ಡಿ, ರಾಜಸ್ತಾನದ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇಯವರ ಮಗ ದುಷ್ಯಂತ್ ಸಿಂಗ್ ಅವರನ್ನು ಇಡಿ ತನಿಖೆಗೆ ಒಳಪಡಿಸಿದೆ.

ಯುಪಿಎ ಅಧಿಕಾರಾವಧಿಯಲ್ಲಿ ಇಡಿ ತನಿಖೆಗೆ ಒಳಗಾಗಿದ್ದ ಮುಖ್ಯ ಬಿಜೆಪಿ ನಾಯಕರೆಂದರೆ ಗಾಲಿ ಜನಾರ್ದನ ರೆಡ್ಡಿ, ವ್ಯಾಪಂ ಕೇಸಿನಲ್ಲಿ ಲಕ್ಷ್ಮೀಕಾಂತ ಶರ್ಮಾ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ. ಆಗ ಟಿಎಂಸಿ ನಾಯಕರು ರೋಸ್ ವ್ಯಾಲಿ ಚಿಟ್ ಫಂಡ್ ಕೇಸಿನಲ್ಲಿ ಸುದೀಪ್ ಬಂದೋಪಾಧ್ಯಾಯ, ಕುಣಾಲ್ ಘೋಷ್, ಸ್ರೋಂಜೋಯ್ ಬೋಸ್, ಮದನ್ ಮಿತ್ರ, ಅರ್ಪಿತಾ ಘೋಷ್, ಮುಕುಲ್ ರಾಯ್, ಸಾರದಾ ಕೇಸಿನಲ್ಲಿ ತಪಸ್ ಪಾಲ್ ಸಹ ಇಡಿ ತನಿಖೆಗೆ ಒಳಗಾಗಿದ್ದರು. 

ಯುಪಿಎ ಕಾಲದಲ್ಲಿ ಕಾಂಗ್ರೆಸ್ ನಾಯಕರೂ ಇಡಿ ಕೊಂಡಿಗೆ ಸಿಲುಕಿದ್ದರು. ಆದರ್ಶ ಹೌಸಿಂಗ್ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ್, ಕಾಮನ್ ವೆಲ್ತ್ ಗೇಮ್ಸ್ ಹಗರಣದಲ್ಲಿ ಸುರೇಶ್ ಕಲ್ಮಾಡಿ, ಕಲ್ಲಿದ್ದಲು ಪ್ರಕರಣದಲ್ಲಿ ನವೀನ್ ಜಿಂದಾಲ್ ಪ್ರಮುಖರು. 2ಜಿ ಹಗರಣದಲ್ಲಿ ಯುಪಿಎ ಅಂಗ ಪಕ್ಷಗಳಾದ ಡಿಎಂಕೆಯ ಎ. ರಾಜಾ ಮತ್ತು ಕನಿಮೊಳಿ, ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ದಯಾನಿಧಿ ಮಾರನ್ ಮತ್ತು ಕಲಾನಿಧಿ ಮಾರನ್ ಇಡಿ ತನಿಖೆಗೊಳಗಾಗಿದ್ದರು.

“ಇಡಿ ತಾನೇ ಯಾರ ಮೇಲೂ ರಾಜಕೀಯಕ್ಕಾಗಿ ಮೊಕದ್ದಮೆ ಹಾಕುವುದಿಲ್ಲ. ರಾಜ್ಯ ಪೊಲೀಸ್ ಇಲ್ಲವೇ ಕೇಂದ್ರಿಯ ತನಿಖಾ ದಳಗಳ ಮೊಕದ್ದಮೆಗೆ ಒಳಗಾದವರ ಮೇಲೆ ಇಡಿ ದಾಳಿ ಮಾಡುತ್ತದೆ. ನಾವು ಬಿಜೆಪಿಯವರ ಮೇಲೂ ಪ್ರಕರಣ ದಾಖಲಿಸಿದ್ದೇವೆ. ಮೋದಿಯವರು ಬಂದ ಮೇಲೆ ಬಿಜೆಪಿಯ ಜನಾರ್ದನ ರೆಡ್ಡಿ ಮೇಲೆ ಹೊಸದಾಗಿ ತನಿಖೆ ಆರಂಭಿಸಿದ್ದೇವೆ” ಎಂದು ಇಡಿ ಅಧಿಕಾರಿಯೊಬ್ಬರು ಅವರ ಮೇಲಿನ ಆಪಾದನೆಯನ್ನು ಅಲ್ಲಗಳೆದಿದ್ದಾರೆ.

“ನಾವು ಸರಿಯಾಗಿ ಮಾಹಿತಿ ಸಂಗ್ರಹಿಸಿದ ಬಳಿಕವೇ ದಾಳಿ ನಡೆಸುತ್ತೇವೆ. ಚಾರ್ಜ್ ಶೀಟನ್ನು ಕೋರ್ಟುಗಳ ಅವಗಾಹನೆಗೆ ನೀಡಲಾಗುತ್ತದೆ. ಆಪಾದಿತರು ಜಾಮೀನು ಪಡೆಯುವುದು ಏಕೆ ಕಷ್ಟವಾಗುತ್ತಿದೆಯೆಂದರೆ ಅವರು ಮುಗ್ಧರು ಎಂಬುದು ನ್ಯಾಯಾಲಯಗಳಿಗೆ ಮನವರಿಕೆ ಆಗದಿರುವದಾಗಿದೆ” ಎಂದೂ ಆ ಇಡಿ ಅಧಿಕಾರಿ ಹೇಳಿದರು.

“ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ 21 ಪ್ರಕರಣಗಳು ಮುಕ್ತಾಯ ಕಾಣುತ್ತಿದೆ. 18 ಪ್ರಕರಣಗಳಲ್ಲಿ ಈಗಾಗಲೇ 30 ಜನರಿಗೆ  ಶಿಕ್ಷೆ ಆಗಿದೆ. ನಮ್ಮ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದವರ ಪ್ರಮಾಣವು ಸಿಬಿಐಗಿಂತ ಹೆಚ್ಚು” ಎಂದೂ ಆ ಹೆಸರು ಹೇಳಲಿಚ್ಛಿಸದ ಇಡಿ ಅಧಿಕಾರಿ ತಿಳಿಸಿದರು.

(ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್)



Join Whatsapp