ಮೈನ್’ಪುರಿ (ಉತ್ತರಪ್ರದೇಶ): ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಮೈನ್’ಪುರಿಯಲ್ಲಿ ಭೋಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆ ನಡೆದಾಗ ಮೃತಳ ತಂದೆ ಊರಿನಿಂದ ಹೊರಗಿದ್ದು, ತಾಯಿ ಆಗ್ರಾಕ್ಕೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಸಹೋದರಿ ಕೋಚಿಂಗ್ ಕ್ಲಾಸಿನಿಂದ ಹಿಂದಿರುಗಿದಾಗ ಆಕೆಯ ಸಹೋದರಿ ಸ್ಕಾರ್ಫ್’ನೊಂದಿಗೆ ನೇತಾಡುತ್ತಿರುವುದನ್ನು ನೋಡಿದ್ದಾಳೆ. ಘಟನೆಯ ಬಳಿಕ ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ದೀಕ್ಷಿತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸದ್ಯ ಪೊಲೀಸರು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ಸ್ಥಳೀಯ ನಿವಾಸಿ ಪುಷ್ಪೇಂದ್ರ ಎಂಬಾತ ತನ್ನ ಸಹೋದರಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಮೃತಳ ಸಹೋದರಿ ಪೊಲೀಸರಿಗೆ ದೂರು ನೀಡಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಸ್ಪಿ ಕಮಲೇಶ್ ದೀಕ್ಷಿತ್ ತಿಳಿಸಿದ್ದಾರೆ.