ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ಸೈಬರ್ ವಂಚನೆ ವಿರುದ್ಧದ ಬೃಹತ್ ಕಾರ್ಯಾಚರಣೆಯಲ್ಲಿ, ಭಾರತದಾದ್ಯಂತ 105 ಸ್ಥಳಗಳಿಗೆ ಸಿಬಿಐ ದಾಳಿ ನಡೆಸಿದೆ. ಸಿಬಿಐ ಮತ್ತು ಆಯಾ ರಾಜ್ಯ ಪೊಲೀಸರು ನಡೆಸಿದ ಈ ಕಾರ್ಯಾಚರಣೆಗೆ ʼಆಪರೇಶನ್ ಚಕ್ರʼ ಎಂದು ಕರೆಯಲಾಗಿದೆ.
ಭಾರತದಲ್ಲಿನ ಕೆಲವು ಕಾಲ್ ಸೆಂಟರ್ಗಳು ಅಮೆರಿಕದಲ್ಲಿರುವ ಜನರಿಗೆ ತಮ್ಮ ಹಣದ ಬಗ್ಗೆ ನಕಲಿ ಕರೆಗಳ ಮೂಲಕ ವಂಚಿಸುತ್ತಿವೆ ಎಂದು ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, (ಎಫ್ಬಿಐ) ಇಂಟರ್ಪೋಲ್ ಗೆ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ.
ದೆಹಲಿಯ ,ಅಂಡಮಾನ್- ನಿಕೋಬಾರ್, ಪಂಜಾಬ್, ಚಂಡೀಗಢ, ರಾಜಸ್ಥಾನ, ಅಸ್ಸಾಂ ಮತ್ತು ಕರ್ನಾಟಕ ಸೇರಿ ದೇಶಾದ್ಯಂತ 87 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ. 18 ಸ್ಥಳಗಳಲ್ಲಿ ರಾಜ್ಯ ಪೊಲೀಸರ ಮೂಲಕ ಶೋಧ ನಡೆಸಲಾಗಿದೆ.
ಪುಣೆ ಮತ್ತು ಅಹಮದಾಬಾದ್ನಲ್ಲಿ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡ ಎರಡು ಕಾಲ್ ಸೆಂಟರ್ಗಳನ್ನು ಭೇದಿಸಲಾಗಿದೆ ಎಂದು ತಿಳಿದು ಬಂದಿದೆ. ರಾಜಸ್ಥಾನದ ಒಂದು ಸ್ಥಳದಿಂದ ಸಿಬಿಐ ₹ 1.5 ಕೋಟಿ ನಗದು ಮತ್ತು ಒಂದೂವರೆ ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.
ಈ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಡಿಜಿಟಲ್ ಸಾಕ್ಷ್ಯಗಳು, ₹1.5 ಕೋಟಿ ನಗದು ಮತ್ತು 1.5 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.