ಕೇಂದ್ರ ಹಿಂಪಡೆದ ಕಾಯ್ದೆಗಳನ್ನು ಬಿಜೆಪಿ ಆಡಳಿತದ ರಾಜ್ಯಗಳೂ ರದ್ದುಗೊಳಿಸಲಿ: ಸಿದ್ದರಾಮಯ್ಯ ಆಗ್ರಹ

Prasthutha|

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ರೈತರ ತೀವ್ರ ಪ್ರತಿಭಟನೆಗೆ ಮಣಿದು ಹಿಂಪಡೆದಂತೆ, ಬಿಜೆಪಿ ಆಡಳಿತವಿರುವ ರಾಜ್ಯಗಳೂ ಈ ಕಾಯ್ದೆಗಳನ್ನು ರದ್ದುಗೊಳಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

- Advertisement -

ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಬಿಜೆಪಿಯ ಇಬ್ಬರು ಪೋಷಕ ಉದ್ಯಮಿಗಳ ಹಿತಾಸಕ್ತಿ ಕಾಯುವುದಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಲಖಿಂಪುರ ಖೇರಿ ರೈತರ ಮೇಲೆ ಕಾರು ಹತ್ತಿಸಿ, ಹಿಂಸಾಚಾರದ ಮೂಲಕ ಎಂಟು ಮಂದಿಯ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಇವತ್ತಿಗೆ ಒಂದು ವರ್ಷ ಪೂರೈಸಿದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಅಜಯ್ ಮಿಶ್ರಾ ಕುಮ್ಮಕ್ಕಿನಿಂದ ಇವರ ಪುತ್ರ ಆಶಿಶ್ ಮಿಶ್ರಾ ಮತ್ತು ಗ್ಯಾಂಗ್, ಶಾಂತ ರೀತಿಯಿಂದ ಪ್ರತಿಭಟನೆ ನಡೆಸುತ್ತಿದ್ದ ರೈತ ಸಮುದಾಯದ ಮೇಲೆ ದಾಳಿ ನಡೆಸಿದೆ ಮತ್ತು ಕಾರು ಹತ್ತಿಸಿದ್ದರ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದರು. ಈ ಅನಾಗರಿಕ ಕೊಲೆ ನಡೆದು ಇವತ್ತಿಗೆ ಒಂದು ವರ್ಷ. ಆದರೂ ಇದುವರೆಗೂ ಸಂತ್ರಸ್ಥ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಟ್ಟಿಲ್ಲ. ಘಟನೆ ನಂತರ ಸರ್ಕಾರ ತಾನೇ ವಾಗ್ದಾನ ಮಾಡಿದ್ದ ರೈತರ ಬೇಡಿಕೆಗಳನ್ನು ಇದುವರೆಗೂ ಈಡೇರಿಸಿಲ್ಲ. ಘಟನೆಯ ಪ್ರಮುಖ ಸಾಕ್ಷಿ ದಿಲ್‌ಬಾಗ್ ಮೇಲೆ ಗುಂಡಿನ ದಾಳಿ ನಡೆಯಿತು. ಪ್ರಕರಣದ ತನಿಖೆಯನ್ನು ಸೂಕ್ತವಾಗಿ ನಡೆಸುತ್ತಿಲ್ಲ ಎಂದು ನ್ಯಾಯಾಲಯಗಳೂ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿವೆ ಎಂದು ಸಾಂದರ್ಭಿಕವಾಗಿ ತಿಳಿಸಿದರು.

- Advertisement -

ರಾಷ್ಟ್ರ ರಾಜಧಾನಿಯಲ್ಲಿ 378 ದಿನಗಳ ಕಾಲ ನಡೆದ ರೈತ ಸಂಘಟನೆಗಳ ಬೃಹತ್ ಪ್ರತಿಭಟನೆ ಕಾರಣಕ್ಕೆ ಕೇಂದ್ರ ಜಾರಿಗೆ ತಂದಿದ್ದ ಮೂರು ಅನಾಗರಿಕ ರೈತ ಕಾಯ್ದೆಗಳನ್ನು 750ಕ್ಕೂ ಅಧಿಕ ಸಂಖ್ಯೆಯ ರೈತರು ಹುತಾತ್ಮರಾದ ಬಳಿಕ ಪ್ರಧಾನಿ ಮೋದಿ ಅವರು ನೆಪ ಮಾತ್ರಕ್ಕೆ ಹಿಂದಕ್ಕೆ ಪಡೆದರು. ಆದರೆ ನಮ್ಮ ರಾಜ್ಯವೂ ಸೇರಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮಾತ್ರ ಇನ್ನೂ ಕಾಯ್ದೆಗಳನ್ನು ವಾಪಾಸ್ ಪಡೆಯಲಾಗಿಲ್ಲ ಎಂದು ಅವರು ಕಿಡಿಕಾರಿದರು.

ರಾಜ್ಯದಲ್ಲೂ ರೈತರು ಈ ಕಾಯ್ದೆಗಳನ್ನು ವಿರೋಧಿಸಿ ಬೀದಿಗಿಳಿದು ದಿನಗಟ್ಟಲೆ ಪ್ರತಿಭಟನೆ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಇನ್ನೂ ಆ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಮನಸ್ಸು ಮಾಡಿಲ್ಲ. ಕೇಂದ್ರದಲ್ಲಿ ಒಂದು ನೀತಿ, ರಾಜ್ಯದಲ್ಲಿ ಮತ್ತೊಂದು ನೀತಿ. ಇದು ಡಬ್ಬಲ್ ಎಂಜಿನ್ ಸರ್ಕಾರದ ಡಬ್ಬಲ್ ನಾಲಗೆ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಪ್ರಧಾನಿ ಮೋದಿ ಅವರು ತಕ್ಷಣ ಮಧ್ಯ ಪ್ರವೇಶಿಸಬೇಕು. ಲಖಿಂಪುರ್ ಖೇರಿ ಪ್ರಕರಣದ ಕ್ಷಿಪ್ರ ವಿಚಾರಣೆಗೆ ತ್ವರಿತ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಲು ಯೋಗಿ ಸರ್ಕಾರಕ್ಕೆ ಸೂಚನೆ ನೀಡಬೇಕು. ಇಡಿ ದೇಶದ ರೈತರ ಪ್ರಮುಖ ಬೇಡಿಕೆಯಾಗಿರುವ ಎಂಎಸ್‌ಪಿ ಯನ್ನು ಈ ಕೂಡಲೇ ಶಾಸನಬದ್ದಗೊಳಿಸಬೇಕು. ಮೃತ ರೈತ ಕುಟುಂಬಗಳಿಗೆ ಮನೆಗೊಂದು ಸರ್ಕಾರಿ ಉದ್ಯೋಗ ನೀಡುವುದರ ಜತೆಗೆ ಘಟನೆ ಸಂದರ್ಭದಲ್ಲಿ ಸರ್ಕಾರ ನೀಡಿದ್ದ ಭರವಸೆಗಳನ್ನು ಕೂಡಲೇ ಈಡೇರಿಸಬೇಕು. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳೂ ಕೇಂದ್ರ ಹಿಂದಕ್ಕೆ ಪಡೆದ ಕಾಯ್ದೆಗಳನ್ನು ರದ್ದುಗೊಳಿಸಲು ಸೂಚಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.




Join Whatsapp