ಉಡುಪಿ ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ: ವಿವಿಧ ಸಂಘಟನೆಗಳ ಆಕ್ರೋಶ

Prasthutha|

►ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲು ಒತ್ತಾಯ

- Advertisement -

ಉಡುಪಿ: ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಅ.2ರಂದು ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ಕೆಲವು ಕಾರ್ಯಕರ್ತರು ತಲವಾರು ಪ್ರದರ್ಶಿಸಿರುವುದುದಕ್ಕೆ ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿವೆ.

ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್ “ಮೆರವಣಿಗೆಯಲ್ಲಿ ಶಸ್ತ್ರಾಸ್ತ್ರ  ಪ್ರದರ್ಶನ ಮಾಡಿರುವುದು ಖಂಡನೀಯ, ಪೊಲೀಸ್ ಇಲಾಖೆ ಕೂಡಲೇ ಸಂಘಟಕರು ಮತ್ತು ತಲವಾರು ಪ್ರದರ್ಶನ ಮಾಡಿರುವವರ ಮೇಲೆ ಎಫ್ ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು” ಒತ್ತಾಯಿಸಿದ್ದಾರೆ.

- Advertisement -

“ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸಿರುವುದು ದೇಶದ ಸಂವಿಧಾನಕ್ಕೆ ಒಡ್ಡಿರುವ ಬೆದರಿಕೆಯಾಗಿದೆ. ಹಿಂಜಾವೇ ಕಾರ್ಯಕರ್ತರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು” ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.

“ಸೌಹಾರ್ದತೆಗೆ ಹೆಸರುವಾಸಿಯಾದ ಉಡುಪಿಯನ್ನು ಉತ್ತರ ಪ್ರದೇಶದ ಗೂಂಡಾ ರಾಜ್ಯ ಮಾಡಲು ಹೊರಟಿರುವ ಕೋಮುವಾದಿಗಳ ನಡೆ ಖಂಡನೀಯ ಹಾಗೂ ಭಯದ ವಾತಾವರಣ ಸೃಷ್ಟಿಸಲು ಕಾರಣರಾದ ಗೂಂಡಾಗಳ ಮೇಲೆ ಕೂಡಲೇ ಕೇಸು ದಾಖಲಿಸಬೇಕು” ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಒತ್ತಾಯಿಸಿದ್ದಾರೆ.

ಎಸ್ ಡಿಪಿಐ ಉಡುಪಿ ಜಿಲ್ಲಾ ಬಿ.ಎನ್. ಶಾಹಿದ್ ಅಲಿ ಕೃತ್ಯವನ್ನು ಖಂಡಿಸಿದ್ದು,  ಪೊಲೀಸರ ಸಮ್ಮುಖದಲ್ಲೇ ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಕಳೆದ ಬಾರಿ ನಡೆದ ಕಾರ್ಯಕ್ರಮದಲ್ಲಿಯೂ  ಇದೇ ರೀತಿಯ ತಲವಾರು ತ್ರಿಶೂಲ ಮುಂತಾದ ಮಾರಕ ಆಯುಧಗಳನ್ನು ಪ್ರದರ್ಶಿಸಲಾಗಿತ್ತು. ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದರೂ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿರಲಿಲ್ಲ. ಪೊಲೀಸರ ನಿರ್ಲಕ್ಷದಿಂದಾಗಿ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದ್ದು ಇಂದು ತಲವಾರು ಪ್ರದರ್ಶಿಸಿದ ಹಿಂದೂ  ಜಾಗರಣ ವೇದಿಕೆಯ ಕಾರ್ಯಕರ್ತರ ಹಾಗೂ ಸಂಘಟಕರ ವಿರುದ್ಧ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಕಾಯಿದೆ ಅಡಿ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.



Join Whatsapp